Sunday, April 27, 2014

ನಾನು ಕಂಡ "ಉಳಿದವರು ಕಂಡಂತೆ"


ನಾನು ಉಡುಪಿಯವನು, ಈ ಸಿನೇಮಾದ ಬಗೆಗಿನ ನನ್ನ ಅನಿಸಿಕೆ ಅಥವಾ ನಿಲುವು ನಿರ್ವಾಜ್ಯವಾಗಿಲ್ಲದೆ ಇರಬಹುದೇನೊ! ಆದರೂ ನನಗನಿಸಿದ್ದು, ನಾನು ಕಂಡ "ಉಳಿದವರು ಕಂಡಂತೆ":

ಕಪ್ಪು ಕಾಗೆಗೆ ಮಿಕ್ಕಿರೊ ಬಣ್ಣ ಎಲ್ಲಾ ಕಾಣಿಸುತ್ತಾ?
ಥಿಯೇಟರಿನಿಂದ ಸಿನೇಮಾ ನೋಡ್ಕೊಂಡು ಆಚೆ ಬಂದ ಪ್ರೇಕ್ಷಕನಿಗೆ ಅವನ ಅರಿವಿಕೆಯ ಉದ್ದಗಲಕ್ಕೆ ಮೀರಿದ ಬೇರೆ ಆಯಾಮಗಳು ಕಾಣಿಸುತ್ತಾ?

ಕೆಲವೊಂದು ದೃಶ್ಯಗಳಲ್ಲಿ ಕರಾವಳಿಯ ಸೌಂದರ್ಯದ ಅನಾವರಣ ಅಮೋಘ, ವಿಶೇಷವಾಗಿ ಸಿನೇಮಾದ ಆರಂಭದ ದೃಶ್ಯ, ಅದ್ಭುತವಾಗಿ ಮೂಡಿಬಂದಿದೆ. ಒಟ್ಟಿನಲ್ಲಿ ಸಿನೇಮಾಟೊಗ್ರಾಫಿಯ ಬಗ್ಗೆ ಎರಡು ಮಾತಿಲ್ಲ. ಅದಕ್ಕೆ ಪೋರಕವಾಗಿ ಹಿನ್ನೆಲೆಯಲ್ಲಿ ಶೀತಲ್ ಶೆಟ್ಟಿಯ ನಿರೂಪಣೆ.

ಸಿನಿಮಾದ ಹೆಸರೇ ಸೂಚಿಸುವಂತೆ, ನಿರ್ದೇಶಕ ಇಲ್ಲಿ ಒಂದು ನಿರ್ದಿಷ್ಟ ಅಂತ್ಯ ಅಥವಾ ಉತ್ತರದ ಗೋಜಿಗೆ ಹೋಗಿಲ್ಲ.
ನನಗನಿಸಿದ ಮಟ್ಟಿಗೆ, ಒಂದು ಘಟನೆಯನ್ನು ನೇರಕ್ಕಿಂತ ಹೆಚ್ಚಾಗಿ ಪರೋಕ್ಷವಾಗಿ ನೋಡಿದವರು, ಭಾಗಿಯಾದರು ಅವರವರ ದೄಷ್ಟಿಕೋನಕ್ಕನುಗುಣವಾಗಿ ನಿರೂಪಿಸುವುದು ನಿರ್ದೇಶಕನ ಆಶಯ. ಅದಕ್ಕೆ ಅವನು ಕಂಡುಕೊಂಡ ಮಾಧ್ಯಮ ಒಬ್ಬಳು ಪತ್ರಕರ್ತೆ.
ಅವಳ ನಿಲುವು ಅದೆಷ್ಟು ತಟಸ್ಥವಾಗಿದ್ದರೂ, ಆ ಘಟನೆಯ ಒಂದು ಪ್ರಮುಖ ಪಾಲುದಾರನ ಬದುಕಿನ ನಿರ್ದಿಷ್ಟ ಘಟ್ಟಕ್ಕೆ ಅವಳು ಸಾಕ್ಷಿದಾರಳಾಗಿರುವುದರಿಂದ ಅವಳ ಅನಿಸಿಕೆಗಳು ಈ ಕಥೆಯ ನಿರೂಪಣೆಯಲ್ಲಿ ಇಲ್ಲ ಅನ್ನುವುದು ಸ್ವಲ್ಪ ಅಸಾದ್ಯ.

ನಿರ್ದೇಶಕ, ಪ್ರತಿಯೊಂದು ದೃಶ್ಯದಲ್ಲೂ ಆದಷ್ಟು ವಿವರಗಳನ್ನು ಹೇಳುವ ಪ್ರಾಮಾಣಿಕ ಪ್ರಯತ್ನ ಮಾಡಿದ್ದಾನೆ, ಹಾಗೂ ಸಾಕಷ್ಟು ಕಡೆ ಗೆದ್ದಿದ್ದಾನೆ.
ಪೇಪರ್ ಪೇಪರ್ ಸಾಂಗ್‍ನಲ್ಲಿಯ ಮಕ್ಕಳ ನೃತ್ಯ, ಹುಲಿ ವೇಷದವರ ಡಾನ್ಸಿಗೆ "ಬಾ ಬಾರೊ ರಣಧೀರ" ಹಾಗು "ಸಂತೋಷಕ್ಕೆ ಹಾಡಿ ಸಂತೋಷಕ್ಕೆ" ಬೀಟ್ಸ್, ತಾರ ಮೀನ್ ಸಾರ್ ಮಾಡುವಾಗಿನ ಸನ್ನಿವೇಶದಲ್ಲಿ ಡಿಟೈಲ್ಸ್‍ಗೆ ಕೊಟ್ಟ ಪ್ರಾಮುಖ್ಯತೆ, ಹಿನ್ನೆಲೆಯಲ್ಲಿ ಮಧ್ಯೆ ಮಧ್ಯೆ ಬಂದು ಕಚಗುಳಿ ಇಟ್ಟು ಹೋಗುವ "ಕಾಕಿಗ್ ಬಣ್ಣ ಕಾಂತ?" ಹಾಡಿನ ಶೃತಿ, ಯಕ್ಷಗಾನದ ಹಿನ್ನೆಲೆಯಲ್ಲಿ "ಅದು" ಏನಿರಬಹುದು ಎಂದು ಪ್ರೇಕ್ಷಕನ ತಲೆಯಲ್ಲಿ ಹುಳ ಬಿಡುವ ಯಶಸ್ವಿ ಪ್ರಯತ್ನ, ಚರ್ಚಿನ ಒಳ ಹೋಗುವ ಮುಂಚೆ ಚಪ್ಪಲನ್ನು ಪಕ್ಕಕ್ಕಿಟ್ಟು ಹೋಗುವ ದೃಶ್ಯದಲ್ಲಿ ಹುಡುಗನಿಗೆ ಚರ್ಚಿನ ಬಗೆಗಿರುವ ಗೌರವ, ಹಿನ್ನೆಲೆಯಲಿ ಸಂದರ್ಭಕ್ಕೆ ಸಮಂಜಸತೆ ಕೊಡುವ ಹಾಡು "ಅದೇನೋ ಹೇಳಲು ಬಂದವನು, ಹೇಳದೆ ಮಾತನುಳಿಸುಕೊಂಡು ಹೋದನು". ಸಣ್ಣ-ಪುಟ್ಟ ವಿಚಾರಗಳಿಗೆ ಪ್ರಾಮುಖ್ಯತೆ ಕೊಡುವುದರೊಂದಿಗೆ ಪಾತ್ರದ ವ್ಯಕ್ತಿತ್ವವನ್ನು ತಿಳಿಸುವ ರೀತಿ ನನಗಿಷ್ಟವಾಯಿತು.

ಸಿನೇಮಾದ ಹಿನ್ನಲೆ ಸಂಗೀತ ಹಾಗೂ ಹಾಡುಗಳ ಬಗ್ಗೆ ಎರಡು ಮಾತಿಲ್ಲ, ಸಂಗೀತಕ್ಕೆ ಸರಿಯಾಗಿ ಜೊತೆಯಾದ ಸಾಹಿತ್ಯ; ಮುತುವರ್ಜಿಯಿಂದ ಪೋಣಿಸಿದ ಮುತ್ತಿನಸರದಂತೆ ರಂಜಿಸಿಸುವುದರಲ್ಲಿ ಮೋಸವಿಲ್ಲ.
ಕಥೆಯ ನಿರೂಪಣೆಯಲ್ಲಿ, ಪಾತ್ರಪೋಷಣೆಯಲ್ಲಿ, ಹಾಗೂ ಸಂಗಿತದಲ್ಲಿ ಕೆಲವೊಂದು ಹಾಲಿವುಡ್ ಚಿತ್ರ/ನಟರ ಸ್ಪೂರ್ತಿ ಕಾಣಸಿಗುತ್ತದೆ.

ಸಿನೇಮಾದಲ್ಲಿ ತಪ್ಪುಗಳಿಲ್ಲ ಅಂತಲ್ಲ, ಸುಮಾರಷ್ಟು ಗಮನಕ್ಕೆ ಬರಬಹುದು, ಗಮನಾರ್ಹವಾಗಿ ಕೆಲವೊಂದು ಸಂಭಾಷಣೆಗಳಲ್ಲಿ ರತ್ನಕ್ಕನ ಬೆಂಗಳೂರು ಕನ್ನಡ, ಉಡುಪಿಯವನಾದರೂ ರಘು ಮಾತಾಡುವಾಗೆಲ್ಲ ಉಡುಪಿ ಕನ್ನಡ ಅಥವಾ ತುಳುವಿನ ಉಚ್ಛಾರಣೆಯಿಲ್ಲದಿರುವುದು.

ಇಲ್ಲದ ಕಾಗೆಯನ್ನು ಅಟ್ಟಿಸಿಕೊಂಡು ಹೋಗುವ, ಬಂಗಿ ಸೇದುವ ಬಾಲುವಿನ ಕಥೆಯನ್ನು ಸಂಪೂರ್ಣ ನಂಬುವಂತಿಲ್ಲ.
ಸ್ನೇಹಿತನ ಬಗೆಗಿನ ಪಕ್ಷಪಾತದ ಒಂದು ಸಣ್ಣ ಸಂದೇಹದ ಸುಳಿಯಿಂದಾಗಿ, ರಿಚ್ಚಿ ರಘುವನ್ನು ಸಾಯಿಸಿಲ್ಲ ಎನ್ನುವ ರಿಚ್ಚಿಯ ಗೆಳೆಯ ದಿನೇಶನು ಕಥೆಯನ್ನೂ ನಂಬುವಂತಿಲ್ಲ.
ಶೈಲೇಶನ ಕಥೆಯಲ್ಲಿ ಅಂತೆ-ಕಂತೆಗಳೆ ತುಂಬಿವೆ. ಅವನು ನೇರವಾಗಿ ಕಂಡಿರುವ ಘಟನೆಗಳು ಒಂದೂ ಇಲ್ಲ.
ಶಂಕರ್ ಪೂಜಾರಿ ರಿಚ್ಚಿಗೆ ಹಾಗೂ ಮುನ್ನನಿಗೆ ಗುಟ್ಟಾಗಿ ಹೇಳಿರುವ ವಿಷಯ ಕೊನೆಗೂ ಗುಟ್ಟಾಗೆ ಉಳಿಯಿತು.
ರತ್ನಕ್ಕನ ದೃಷ್ಟಿಕೋನದ ಕಥೆಯಲ್ಲಿ ಬರದ ಮಗನಿಗಾಗಿ ರತ್ನಕ್ಕ ಕಾದಿದ್ದಷ್ಟೆ ಸಿಗುತಿತ್ತೇನೊ? ಅದಕ್ಕೆ ಇರಬೇಕು, ಪ್ರೇಕ್ಷಕ ಅವಳ ಕಥೆಗೆ ಕಾಯುವಂತೆ ಮಾಡಿದ್ದಾನೆ ನಿರ್ದೇಶಕ!
ಕತ್ತಲಿಗೆ ಹೆದರುವ ಡೆಮಾಕ್ರಸಿಯ ಕಥೆಯಲ್ಲಿ ಕನಸು ಮತ್ತು ಮುಗ್ಧತೆಯ ಹೊರತು ಬೇರೇನು ಸಿಗದೇನೊ! ಅಲ್ಲಿಯೂ ನಿರ್ದೇಶಕ ಕಾಡಿಸಿ ಬಿಟ್ಟಿದ್ದಾನೆ.

ನಿರ್ದೇಶನದ ಜೊತೆಗೆ ಅದ್ಭುತವಾದ ಮ್ಯಾನರಿಸಂನಿಂದ ರಿಚ್ಚಿಯ ಪಾತ್ರ ಮಾಡಿ ನಟನಾಗಿಯೂ ಗೆದ್ದಿದ್ದಾನೆ ರಕ್ಷಿತ್.
ಉಳಿದಂತೆ ತಾರ, ಕಿಶೋರ್, ಬಾಲ ನಟ ಸೋಹನ್, ವಿಶೇಷವಾಗಿ ಅಚ್ಚುತ್ ಎಲ್ಲರ ನಟನೆ ಮೆಚ್ಚುವಂತದ್ದು.
ಚಿಕ್ಕದಾದರೂ ಚೊಕ್ಕವಾಗಿ ನಟಿಸಿದ ಯಜ್ನಾ ಶೆಟ್ಟಿ, ಪ್ರಥಮ ಯತ್ನದಲ್ಲಿ ಉತ್ತಮವಾಗಿ ನಟಿಸಿದ ಶೀತಲ್ ಶೆಟ್ಟಿ, ಚಿತ್ರಕಥೆಗೆ ಸೂಕ್ತವಾಗಿ ಹೆಗಲು ಕೊಟ್ಟ ದಿನೇಶ್, ರಿಶಭ್ ಹಾಗೂ ರಘು.

ಯಾಕೆ? - ಎಂಬ ಪ್ರಶ್ನೆಗೆ ಉತ್ತರ ಸಿಗದೆ ರಿಚ್ಚಿ ಸಾಯುವಲ್ಲಿ, ಪ್ರೇಕ್ಷಕನ ಯಾಕೆ-ಹೇಗೆಗಳನ್ನು ಹಾಗೆ ಉಳಿಸಿ ಉತ್ತಮವಾದ ಅಂತ್ಯವನ್ನೆ ಕಾಣಿಸಿದ್ದಾನೆ ನಿರ್ದೇಶಕ.
ಸಿನಿಮಾದ ಕೊನೆಯೇನೆಂದರೆ - ಅವರವರ ದೃಷ್ಟಿಕೋನಕ್ಕೆ, ಅವರ ಸಮಾಧಾನಕ್ಕೆ, ಅವರವರ ವಿವರಣೆ.
ಪ್ರೇಕ್ಷಕನಿಗೆ "ಅವನು ಕಂಡಂತೆ" ಅಭಿಪ್ರಾಯಪಡುವ ಅಧಿಕಾರವೂ ಇದೆ.