Thursday, October 8, 2009

ನೆನಪುಗಳು...

ಮತ್ತದೆ ಜಿರ ಜಿರ ಮಳೆ, ಬಿಸಿಲನ್ನು ಅಡ್ಡಗಟ್ಟಲು ಹಟ ಹಿಡಿದು ನಿಂತ ಕಪ್ಪು ಮೋಡಗಳು, ಮಳೆಯ ಹೊಡೆತಕ್ಕೆ ಸೋತು ಬಗ್ಗಿ ನಿಂತ ಗಿಡಮರಗಳು, ತನ್ನಿರುವಿಕೆಯ ಉಳಿಸಿಕೊಳ್ಳಲು ಹರಸಾಹಸ ಮಾಡುತ್ತಿರುವ ಕಾಲುದಾರಿಯ ಹುಲ್ಲ ಹೊದಿಕೆಗಳು. ನೆಟ್ಟ ದೃಷ್ಟಿಯನ್ನು ಬದಲಾಯಿಸದಷ್ಟು ಆಲಸ್ಯ. ಕಣ್ಣಿಗೊಂದಿಷ್ಟು ವಿಶ್ರಾಂತಿ ಕೊಡುವಂತೆ ಎಂಬಂತೆ ಕಣ್ಣರೆಪ್ಪೆಗಳ ಸಂಕುಚಿಸಿ ಕತ್ತನು ಹಿಂದೆ ಬಾಗಿಸಿ ಕೂತೆ. ಸುರಿವ ಮಳೆಯ ಸ್ಪಷ್ಟ ಚಿತ್ರಣ ನೋಡಲೆಂದು ತೆರೆದಿಟ್ಟ ಬಾಲ್ಕನಿಯ ಬಾಗಿಲಿನ ಮೂಲಕ ಒಳನುಗ್ಗುತ್ತಿರುವ ತಣ್ಣನೆಯ ಗಾಳಿಗಿಂತಲೂ ರಭಸವಾಗಿ ನೆನಪುಗಳ ಬಿರುಗಾಳಿ ನನ್ನತ್ತ ಧಾವಿಸಿ ಬಂದು ನನ್ನನಾವರಿಸಿಕೊಳ್ಳಲಾರಂಭಿಸಿದವು.

ಎದುರಾಳಿಗಳ ಆರ್ಭಟಕೆ ದರೆಗುರುಳುವ ಸೈನಿಕನಂತೆ ನನ್ನ ಬೆನ್ನನ್ನು ನೆಲಕ್ಕಾನಿಸಿ ಮಲಗಿದೆ. ಮನಸ್ಸನ್ನು ಹಗುರವಾಗಿಸುವ ನನ್ನೆಲ್ಲಾ ಪ್ರಯತ್ನಗಳನ್ನು ವ್ಯರ್ಥವಾಗಿಸುತ ಭಾರವಾಗಿಸುವಲ್ಲಿ ಸಫಲವಾಯ್ತು ನೆನಪುಗಳು.
ಕನಸುಗಳ ಬೆನ್ನತ್ತಿ ಹೊರಟ ನನಗೆ, ನನ್ನ ಕನಸುಗಳ ಅವಶೇಷಗಳಷ್ಟೆ ಕಂಡಂತಾಗಿ ಮನದ ಪುಟದಲ್ಲೊಂದಿಷ್ಟು ಅಳಿಸಲಾಗದ ಪದಗಳು ಅಚ್ಚಾದವು:

ನಾ ನೋಡೊ ಕನ್ನಡಿ ಗಾಜಿನದಲ್ಲ
ನೀರ ತೆಳು ಮೈಯದು
ಗಾಜ ಒಡೆಯಬೇಕಾಗಿಲ್ಲ
ಕಲ್ಲೊಂದ ಎಸೆದರಷ್ಟೆ ಸಾಕು
ಒಣ ಎಲೆಯೊಂದು ಬಿದ್ದರಷ್ಟೆ ಆಯ್ತು
ಗಾಳಿಯ ತುಸು ಸ್ಪರ್ಶವೆ ಸಾಕು

ಯೋಚಿಸಿದಷ್ಟು ಜಟಿಲವಾಗುವ ಈ ಕನಸಿನ ಹಂಗ್ಯಾಕೆಂದು ಮನದ ಕೊಳವನ್ನೆಲ್ಲಾ ಕಾಲಿ ಮಾಡಿ ಕುಳಿತರೆ, ನನ್ನೊಳಗಿಂದ ನನಗೆ ಅರಿಯದ ಪ್ರತಿಧ್ವನಿ:

ಭುವಿಗೆನ್ನೆ ತುಂಬ ಮುಗಿಲು ಸುರಿದ ಮುತ್ತಿನ ಗುರುತು
ನನ್ನ ಎದೆಯ ತುಂಬ ಅವಳು ಬಂದ ಹೆಜ್ಜೆಯ ಗುರುತು
ಎದೆ ಮುಗಿಲಿನಲ್ಲಿ ರಂಗು ಚೆಲ್ಲಿ ನಿಂತಳು ಅವಳು
ಬರೆದು ಹೆಸರ ಕಾಮನ ಬಿಲ್ಲು

ಮತ್ತೆ ಕಾಣಿಸದ ದಿಕ್ಕಿಂದ ಕೂಗಿ ಕರೆದಂತೆ "ಚಿನ್ನ ನೀನಿಲ್ಲದೆ ಭಿಮ್ಮೆನ್ನುತಿದೆ ರಮ್ಯೋಧ್ಯಾನ"

ಹಿಡಿತಕ್ಕೆ ಸಿಗದ ಹಾದಿಯ ಪಯಣದಲ್ಲಿ ಮತ್ತೆ ಕವನಗಳ ಸವಾರಿ, ಅವಳ ಬಗ್ಗೆ ಒಂದಿಷ್ಟು ಗೀಚುವ ತಡೆಹಿಡಿಯಲಾಗದ ಮಿಡಿತಗಳ ತುಡಿತ:

ನೀನು,
ಬೆಳ್ಳಿ ಮೋಡದ ಬಾನಿನೊಳಗೊಂದು
ಬಣ್ಣದ ಚಿತ್ತಾರ
ಎಲೆಯಿರದ ಬಳ್ಳಿಯಲೊಂದು
ನಗುವ ಮೊಗ್ಗು
ಕಪ್ಪು ಕಡಲನು ಚುಂಬಿಸಿ
ಕೆಂಪಾಗಿಸುವ ನೇಸರ

ನೀನು,
ಸುಡುವ ಮರುಭೂಮಿಯ ಪಯಣದಿ
ತಂಗಾಳಿಯ ಸ್ಪರ್ಶ
ಕಾಲಿ ಹಾಳೆಯ ಮೇಲೆ ಅರಳಿ
ನಿಂತಿರುವ ರಂಗೋಲಿ
ಕರಿ ಚಾದರ ಹೊದ್ದಿರುವ ಆಗಸದಲೊಂದು
ಒಂಟಿ "ಚುಕ್ಕಿ"

ಕಣ್ಣಿಗೂ, ಕೆನ್ನೆಗೂ ಜಗಳ ಬಂದು ಕೆನ್ನೆಯನ್ನು ಒದ್ದೆ ಮಾಡಿಸುವುದನ್ನೆ ಮರೆತಿದೆ ಕಣ್ಣು, ಹಟ ಸಾದಿಸುವ ಪುಟ್ಟ ಬಾಲಕನಂತೆ!
ತುಟಿಗಳ ಮೇಲೆ ಬೆರಳುಗಳ ಇಳಿಬಿಟ್ಟು ಹೊಸ ಗೆಳೆತನವ ಹುಟ್ಟಿಸಿದಂತೆ!
ನೆನಪುಗಳ ಮಳೆಯಲ್ಲಿ ನೆನೆದು ಸೋತಿರುವ ಮನಸ್ಸನ್ನು ಹಗುರವಾಗಿಸಲು ತುಟಿಯಂಚಿಂದ ನಕ್ಕೆ, ಬರಿ ನಲಿವುಗಳನು ಉಳಿಸಿ!
ಈ ನೆನಪುಗಳೇ ಹೀಗೆ, ಕಾಡುವವು, ಕೆಣಕುವವು, ನೋಯಿಸುವವು, ನಲಿಸುವವು. ಕೊನೆಗೆ ಬದುಕಲೊಂದು ಭರವಸೆಯ ಉಳಿಸುವುದು!

No comments: