Thursday, January 22, 2009

ನನ್ನೊಡನೆ ನಾನೊಮ್ಮೆ

ಮಸಸನ್ನು ಅದರ ಪಾಡಿಗೆ ಹರಿಯ ಬಿಟ್ಟಾಗ ಹುಟ್ಟಿಕೊಂಡ ಯೋಚನೆಯ ತುಣಿಕಿದು....

"ನನ್ನೊಡನೆ ನಾನೊಮ್ಮೆ"

ಅರರೆ ಯಾರದು ನನ್ನಡಿಯಲಿ
ನನ್ನ ಹಿಂಬಾಲಿಸಿ
ಕೇಳದೆ ನನ್ನನುಮತಿಯ
ಬಳಿ ಬರುತ್ತಿಲ್ಲವೇಕೆ, ನಾ
ಮರದ ನೆರಳಡಿ ಬರಲು?

ರುಂಯೆಂಬ ಗಾಳಿ ಮರವ
ತಬ್ಬಿ ಮುತ್ತಿಕ್ಕುತ್ತಿದೆ
ಮೆಲ್ಲಗೆ ಪಿಸುಗುಡುವಂತೆ ಗುಟ್ಟ!
ಇಟ್ಟ ಕಾಲ ಕಿತ್ತಿಟ್ಟು
ಹೊರ ನಡೆದೆ
ಮರದ ನಾಚಿಕೆಯ ನೋಟ
ನನ್ನ ನಾಚಿಸುವ ಮೊದಲೆ
ಅವಳ ನೆನಪಿನ ವರ್ಷ
ನನ್ನ ನೆನೆಯಲು ಬಿಡದೆ

ಕಾಲುಗಳು ಕಾಲುದಾರಿಯತ್ತ
ದೂರದಿ ಕಿರಿದಾಗುತ್ತ
ಮನದಿ ಹಿರಿದಾಗುತ್ತ
ನಡೆದಷ್ಟು ಕೊನೆಯಿಲ್ಲ
ಕೊನೆ ನನಗೆ ಬೇಕಿಲ್ಲ
ಗುರಿ ಇಲ್ಲದ ಪಯಣಿಗ
ಹೊಸ ಬದುಕಿಗೆ ವಲಸಿಗ

ಕೂತೆ, ದಣಿವು ದಿಕ್ಕು ತಪ್ಪಿಸಲು
ಒಳಗಿನ ಹೊಯ್ದಾಟ
ಮನವ ಬೀಳಿಸಲು
ವಿಶ್ರಾಂತಿಗೆ ಜೊತೆಗಾದ ಶಾಂತಿ
ಕಿಲಕಿಲ ಹಕ್ಕಿಗೆ ಕಲ್ಲೆಸೆವ ಯೋಚನೆ
ಜುಳು ಜುಳು ನೀರಿಗೆ ಮೈಯೊಡ್ಡುವ ಕಲ್ಪನೆ
ಅರಿವಿಗೆ ಬರುವ ಮೊದಲೆ
ನಾ ಬಂದಿ, ನಿದ್ದೆಯ ಸಿಹಿ ಅಪ್ಪುಗೆ

ಕೂತು ಉಸಿರೆಳೆಯುವಂತಿಲ್ಲ
ನನ್ನ ನಿಲ್ದಾಣದ ಸುಳಿವಿಲ್ಲ
ನಿಂತೆ, ಕಾಲೂರಿ ನೆಲದಿ ಗಪ್ಪನೆ
ಯೋಚನೆಗಳೆ ಹೆಗಲೇರಿಸಿ
ನೋವುಗಳ ಹಿಮ್ಮೆಟ್ಟಿಸಿ
ಮತ್ತೆ ತಿರುಗಿ ನೋಡಿದರೆ
ಮತ್ತದೆ ಬೆನ್ನ ಬಿಡದ ನೆರಳು
ಬಿಡದೆ ನೆನಪಾಗಿ ಕಾಡುವ ಅವಳು


ದಿನಾಂಕ: ಜನವರಿ ೫, ೨೦೦೯

Saturday, January 17, 2009

ಆಭಾಸ

ದಿನಾಂಕ: ನವಂಬರ್ ೧೧, ೨೦೦೮
ಆಭಾಸ

ಕಾತರ ತುಂಬಿದ
ಕಣ್ಗಳಿಗೆ ಕವಿದ
ಕನಸಿನ ಅಮಲು

ಯಾರೊ ಹೋದಂತೆ
ಮೆತ್ತಗೆ ಇಳಿದು
ಎದೆಯ ಮೆಟ್ಟಿಲು

ನಿಲ್ಲಿಸಲಾಗುತ್ತಿಲ್ಲ
ದನಿ ಅಡಗಿದೆ
ಕೂಗಿ ಕರೆಯಲು

ಸಣ್ಣಗೆ ಕನವರಿಸಿದೆ,
ಒಳಗಿನ ಬಿಕ್ಕಳಿಕೆ
ಬಾಗಿಲ ತಟ್ಟಲು

ಕಾದು ಕೂತಿದೆ
ಕಬಳಿಸುವೆನೆಂಬಂತೆ
ಹೊರಗಿನ ಕತ್ತಲು

Wednesday, January 14, 2009

ನಿವೇದನೆ

ನಿವೇದನೆ

ಮೊದಲೆಲ್ಲ ಈ ಥರ ಆಗಬಹುದೆಂಬ ಅರಿವಿರಲಿಲ್ಲ. ಧಾರಾಕಾರವಾಗಿ ಸುರಿವ ಮಳೆಯಲ್ಲಿಯೂ ಎನೋ ಕಳೆದುಕೊಂಡ ಅನುಭವ. ಬೆಂಗಳೂರಿನಿಂದ ಜೋಗದತ್ತ ಬಸ್ಸಿನಲ್ಲಿ ಪಯಣಿಸುತ್ತಿದ್ದ ದಿನವಾಗಿತ್ತದು. ಹೊರಗಡೆ ಮಳೆರಾಯನ ಆರ್ಭಟದ ನಡುವೆಯಲ್ಲೂ ಬಸ್ಸಿನೊಳಗೆ ಹಣೆ ಬೆವರುವಷ್ಟು ಸೆಕೆ! ಸರಿ, ಪಕ್ಕದ ಸೀಟಿನಲ್ಲಿ ಯಾರೂ ಇಲ್ಲದಿರುವುದನ್ನು ನನ್ನ ಪ್ರಯೋಜನಕ್ಕೆ ಪಡೆದುಕೊಂಡು ಗಾಜಿನ ಕಿಡಕಿಯನ್ನ ಕೊಂಚ ಸರಿಸಿದ್ದೆ, ನನ್ನ ಈ ಕ್ರೀಯೆ ಯಾರಿಗೂ ಅಡ್ಡಿಪಡಿಸುವುದಿಲ್ಲವೆಂದು ಖಾತ್ರಿ ಪಡಿಸಿಕೊಂಡ ನಂತರ. ಕಣ್ಣುಗಳು ಅಂಕುಡೊಂಕಾಗಿ ಸಾಗುತಿದ್ದ ರಸ್ತೆಯ ಇಕ್ಕೆಲಗಳ ಪ್ರಕೃತಿಯ ಸೊಬಗ ಸವಿಯುತಿದ್ದರೆ, ಮನಸ್ಸಿನ ಯೋಚನೆಯ ಭರ ಮಳೆಯ ತೀವೃತೆಗೆ ಹೊಂದಿಕೊಂಡಂತಿತ್ತು. ಅವ್ಯಕ್ತವಾದ ಭಾವನೆಗಳು ಮನದ ಮೂಲೆಯಿಂದ ಹುಟ್ಟಿ ಕಾಣದ ದಾರಿಯನ್ನು ಅರಸಿ ಹೊರಟಿದ್ದವು. ಭಾವನೆಗಳ ಉಗಮ, ಸಂಗಮ, ಆಳ ಮತ್ತು ಪರಿದಿಯ ಬಗ್ಗೆ ತಲೆ ಕೆಡಿಸಿಕೊಳ್ಳುವ ಗೋಡವೆಗೆ ಹೋಗದೆ, ಕಣ್ಣು ನೆಟ್ಟ ಪಥದತ್ತ ನಾನು ಹೊರಟಿದ್ದೆ.

ಜೋಗದ ಅಗಾಧ ಜಲಧಾರೆಯನ್ನು ಕೆಳಗಿಳಿದು ನೋಡುವ ಹಂಬಲ. ಸ್ನೇಹಿತರ ಜೊತೆಗೂಡಿ ಕೆಳಗಿಳಿಯುವಾಗ ಹನಿ ಹನಿಯೋಪಾದಿ ಬೀಳುತ್ತಿದ್ದ ಮಳೆ, ಕೆಳಗಿಳಿಯುತ್ತಿದಂತೆ ಮೇಲಿಂದ ಘನೀಕರಿಸಿ ಮಳೆಯಾಗಿ ಧರೆಗಿಳಿಯುತ್ತಿದ್ದ ನೀರಿನ ಜೊತೆ ಕೈಜೋಡಿಸಿ ಸವಾಲೆಸೆಯುವಂತೆ ಸುರಿಯುತಿತ್ತು. ಒಂದೆಡೆ ಗಾಳಿ ತುಂಬಿದ ಮಳೆ, ಇನ್ನೊಂದೆಡೆ ಈ ಹೊಸ ಅನುಭವ ಕೊಡುತ್ತಿರುವ ಮುದ, ನಡುವೆ ನಿನ್ನ ನೆನಪು! ಏಲ್ಲ ರಸ-ತಾಳ-ಭಾವಗಳ ಸಮ್ಮೇಳನ ಎಂಬಂತಿತ್ತು ನನ್ನ ಪರಿಸ್ಥಿತಿ. ನೀನಿರಬೇಕಿತ್ತು ಜೊತೆಗೆ ಅನ್ನುವುದು ಹಿಡಿತಕ್ಕೆ ಸಿಗದ ಮನದಾಸೆಯಾಗಿತ್ತು. ಟೈಟಾನಿಕ್ ಸಿನೇಮಾದಲ್ಲಿ ನಾಯಕ ಮತ್ತು ನಾಯಕಿ ಹಡಗಿನ ಮುಂಚೂಣಿಯಲ್ಲಿ ಬೀಸುತ್ತಿರುವ ಗಾಳಿಗೆ ಎದೆಯೊಡ್ಡಿ ನಿಂತಂತೆ, ಕೈಗಳನ್ನು ಎತ್ತಿ ಬೀಸುತ್ತಿರುವ ಮಳೆ ಗಾಳಿಯನ್ನು ಅಪ್ಪಲು ನಿಂತ ನನ್ನನ್ನು ಹಿಂದಿಂದ ನೀನು ಬಾಚಿ ತಬ್ಬಿಕೊಂಡಂತೆ ಅನುಭವ. ತಿರುಗಿ ನೋಡಿದರೆ ನೀನೆಲ್ಲಿ? ಅದೆಷ್ಟೊ ದೂರದಲ್ಲಿ ನನ್ನ ನೋಡಿ ಕಿಸಕ್ಕನೆ ನಕ್ಕಂತೆ. ಅಷ್ಟೊಂದು ಕಾಡಬೇಡ ಕಣೆ ನನ್ನ!

ಮತ್ತೆ ಸಂಜೆ ಗೋಕರ್ಣದತ್ತ ಪ್ರಯಾಣ. ಕಾದು ಕಾದು ಸಿಕ್ಕ ಕೊನೆಯ ಬಸ್ಸಿನೊಳಗೆ ನುಗ್ಗಿ ಕಿಡಕಿ ಪಕ್ಕದ ಸೀಟನ್ನು ಹಿಡಿದುಕೊಂಡೆ. ಕಿಡಕಿಯ ತೂರಿ ಒಳ ನುಗ್ಗಿದ ತುಂತುರು ಮಳೆ ಮುಖದ ಮೇಲೆ ಬಿದ್ದಾಗ ಅದೇನೊ ಹಿತವಾದ ಅನುಭವ. ಹಾಗೆ ಕಣ್ಣು ಮುಚ್ಚಿ ಸೀಟಿಗೊರಗಿದರೆ, ಮನಸ್ಸಿನಲ್ಲಿ ಪುಟಿದೇಳುತ್ತಿದ್ದ ಭಾವನೆಗಳ ಅಸ್ತಿತ್ವದ ಪೂರ್ಣ ಅರಿವಾಯ್ತು. ಹೌದು, ನನ್ನ ಮನಸ್ಸು ನಿನ್ನ ನೆನಪಿನ ಸುಳಿಯ ಸೃಷ್ಟಿಸಿ, ಒಂದೊಂದೆ ಎಳೆಯನ್ನು ಬಿಚ್ಚುತಿತ್ತು. ನಿನ್ನ ನಾನು ಮಿಸ್ ಮಾಡ್ಕೊತಿದ್ದಿನಿ ಅನ್ನುವುದಷ್ಟೆ ಮೊದಲಿಗೆ ಅರಿವಾದ ವಿಷಯ. ಗಕ್ಕೆಂದು ಬಸ್ಸು ನಿಂತಾಗ ಭಾವನೆಗಳ ಕೊಂಡಿ ಒಂದೊಂದಾಗಿ ಹೊರಬಿದ್ದು, ಅರಿವಿನ ಪರಿಧಿಯೊಳಗಡೆ ನುಗ್ಗಿತು. ಅಲ್ಲಿಗೆ ಮನಸ್ಸಿನಲ್ಲಿ ನಡೆಯುತಿದ್ದ ಭಾವನೆಗಳ ತಿಕ್ಕಾಟಗಳಿಗೊಂದು ಆಕಾರ ಬಂತು! ಅಲ್ಲಿ ಸುತ್ತಿಕೊಂಡಿರೊ ಎಲ್ಲಾ ಭಾವನೆಗಳ ಎಳೆಯಲ್ಲೂ ನಿನ್ನದೇ ಇರುವಿಕೆ! ಒಂದೆಡೆ ನನಗೆ ಪ್ರೀಯವಾದ ನಿನ್ನ ವ್ಯಾವಹಾರಿಕ ವ್ಯಕ್ತಿತ್ವ - ನಿನ್ನ ಆ ಚುರುಕು ಮಾತುಗಳು, ಎಲ್ಲವನ್ನೂ ವಿಷ್ಲೇಶಿಸಿಯೇ ಒಪ್ಪಿಕೊಳ್ಳುವ ಬಗ್ಗೆ ನಿರ್ಧರಿಸುವ ಪರಿಕ್ರಮ, ಅನಾವಶ್ಯಕ ವಿಷಯಗಳಲ್ಲಿ ನಿನಗಿರುವ ತಟಸ್ತ ಭಾವನೆ, ಅರಿವಿಗೆ ಬಾರದ ವಿಷಯಗಳನ್ನು ಪರಿಧಿಯೊಳಗೆಳೆದೊಯ್ಯಲು ನಿನಗಿರೊ ಕುತೂಹಲ. ಅಷ್ಟಕ್ಕೆ ನಿಲ್ಲಲಿಲ್ಲ. ಇನ್ನೊಂದೆಡೆ, ನಿನ್ನ ಆತ್ಮೀಯರ ಮೇಲೆ ನಿನಗಿರುವ ಪ್ರೀತಿ, ಕಾತರ, ಒಲವು, ಮಮತೆ. ಹಿಂದೊಮ್ಮೆ ಎಲ್ಲೋ ಒದಿದ್ದ ನೆನಪು, "ಒಬ್ಬ ಹುಡುಗನಿಗೆ ಹುಡುಗಿಯೊಂದು ಇಷ್ಟವಾದಳು ಅಂಥಾದರೆ, ಆ ಹುಡುಗಿಯ ಗುಣ ನಡತೆಗಳು ಅವನ ತಾಯಿಯನ್ನು ಹೋಲುತ್ತಿರುವುದು". ಒಪ್ಪಲೇ ಬೇಕಾದಂತ ಸತ್ಯ ನನ್ನ ವಿಷಯದಲ್ಲಿ.

ನೀನು ನನಗಿಷ್ಟವಾಗಲು ಇವಿಷ್ಟೆ ಸಾಕಾಗಿದ್ದರೂ, ನಿನ್ನನ್ನು ನನ್ನ ಪ್ರೀತಿಯ ಬಂದನದಲ್ಲಿ ಸಿಲುಕಿಸಬೇಕೆಂಬ ಅವಶ್ಯಕತೆ ನನಗಿರಲಿಲ್ಲ. ಯಾವುದೇ ವಿಷಯದಲ್ಲಿ ನನಗೇನೋ ಕೊರತೆ ಇದೆ ಅಂದೆನಿಸಿಲ್ಲ ನನಗೆ. ಇದ್ದುದರಲ್ಲೆ ಸುಖ ಸಂತೋಷ ಹುಡುಕುವ ಜಾಯಾಮಾನ ನನ್ನದು. ಪ್ರೀತಿಸಲು, ನನ್ನ ಕಷ್ಟಗಳಿಗೆ, ಬೇಕು ಬೇಡಗಳಿಗೆ ಹೆಗಲಾಗಲು ಯಾವ ಹುಡುಗಿಯ ಅವಶ್ಯಕತೆ ಇಲ್ಲದಿರುವಾಗ ನಿನ್ನನ್ನು ಪ್ರೀತಿಸುತಿದ್ದೇನೆ ಎಂಬ ಭಾವನೆ ಹೇಗೆ, ಯಾಕೆ ಹುಟ್ಟಿಕೊಂಡಿತು ಎಂದು ನೀನು ಪ್ರಶ್ನಿಸಿದರೆ, ಒಂದು ನಿರ್ಧಿಷ್ಟವಾದ ಉತ್ತರವಿಲ್ಲ ನನ್ನಿಂದ! ಮತ್ತೆ "ಯಾಕೋ ನಾನಿಷ್ಟ ನಿನಗೆ" ಎಂದು ಪ್ರಶ್ನಿಸಬೇಡ ಕಣೆ ನನ್ನ!

ಇವಿಷ್ಟು ಸತ್ಯ!, ನನ್ನ ಮನಸ್ಸಿನಾಳದ ಭಾವನೆಗಳ ಜೊತೆ ನೀನು ಬೇರು ಬಿಟ್ಟಿದ್ದೀಯ. ನಿನ್ನ ಯೋಚನೆ ನನ್ನ ಮನಸ್ಸಿಗೇನೋ ಮುದ ನೀಡುತ್ತಿದೆ. ನಿನ್ನ ಇರುವಿಕೆ ಮತ್ತು ಇಲ್ಲದಿರುವಿಕೆ ನನ್ನ ಕ್ರೀಯೆಗಳ ಮೇಲೆ ಪರಿಣಾಮ ಬೀರುತ್ತಿವೆ. ಮೊಬೈಲ್ ಗುಣುಗಿಕೊಂಡರೆ, ಅದು ನಿನ್ನಿಂದ ಅಲ್ಲವೆಂದು ತಿಳಿದರೆ ಮನಸ್ಸು ಮುದುಡುತ್ತದೆ. ಸೂರ್ಯ ಹುಟ್ಟಿ, ಮುಳುಗುವ ಅವಧಿಯಲ್ಲಿ ನಿನ್ನೊಮ್ಮೆಯೂ ಸಿಗದಿದ್ದರೆ ಅದೇನೊ ಕಳೆದುಕೊಂಡ ಅನುಭವ. ನಾನು ಕಳೆದುಕೊಂಡಿದ್ದೇನು? ಈ ಪ್ರಶ್ನೆಗೆ ನನ್ನಲ್ಲೂ ಉತ್ತರವಿಲ್ಲ! ಇತ್ತೀಚೆಗೆ ಹೊಸ ವರೆತ ಶುರುವಾಗಿದೆ. ನೀನು ನನ್ನ ಮುಂದೆ ಇನ್ನಾವುದೊ ಹುಡುಗನ ಹೆಸೆರು ತೆಗೆದರೆ, ಸೋಲುತ್ತಿರುವ ಭಾವನೆ ನನ್ನಲಿ. ಅದನ್ನು ಅಸೂಯೆ ಎಂದು ಹೇಗೆ ಹೆಸರಿಸಲಿ? ನೀನು ಬೇರೆಯವರ ಸಾಂಗತ್ಯದಲ್ಲಿ ಹಿತ ಕಾಣುವಿಯೆಂದಾದರೆ ನಾನು ಸಂತೋಷ ಪಡುವುದೆ ಶ್ರೇಷ್ಟತೆ ತಾನೆ? ಆದರೆ ಹಾಗಾಗುತ್ತಿಲ್ಲ, ನೀನು ನನ್ನ ಸಾಮಿಪ್ಯ, ಗೆಳೆತನದಲ್ಲಿ ಇನ್ನೂ ಹಿತ ಕಾಣಬೇಕೆಂಬ ಆಸೆ. ಸ್ವಾರ್ಥಿ ಪ್ರಪಂಚದಲಲ್ಲವೆ ನಾನು ಬದುಕುತ್ತಿರುವುದು?

ಮಸಣದ ಹೂವು ಸಿನೇಮಾ ನೋಡಿದಿಯೇನೆ ನೀನು? ಅದರಲ್ಲೊಂದು ಹಾಡು ಬರುತ್ತೆ:
ಯಾವ ಕಾಣಿಕೆ ನೀಡಲಿ ನಿನಗೆ ಓ ಎನ್ನ ಪ್ರೆಯಸೀ?
ಯಾವ ಕಾಣಿಕೆ ನೀಡಲಿ ನಿನಗೆ ಓ ಎನ್ನ ಪ್ರೆಯಸೀ?

ಮಲೆನಾಡ ಕಣಿವೆಗಳ ಹಸಿರು ಬನದಿಂದ
ನಿನಗಾಗಿ ಗಿಳಿಯೊಂದ ನಾ ತರಲಾರೆ
ಸಾಗರದ ಅಲೆಗಳಲಿ ಉಯ್ಯಾಲೆ ಯಾಡುತಿಹ
ಹಂಸ ನಾವೆಯ ನಾ ತರಲಾರೆ

ಮೊದಲಿನಿಂದನೂ ಈ ಹಾಡು ನಂಗೆ ಸಿಕ್ಕಾಪಟ್ಟೆ ಇಷ್ಟ ಕಣೆ. ಯಾಕಂದರೆ, ಎಲ್ಲಾ ಪ್ರೇಮಿಗಳಂತೆ ಮಂದಾರ ಪುಷ್ಪ, ಸೂರ್ಯ-ಚಂದ್ರರನ್ನ ತಂದುಕೊಡ್ತಿನಿ ಅನ್ನೋದಿಲ್ಲ ಈ ಪ್ರೇಮಿ. ತನ್ನ ಹುಡುಗಿಗೆ ಎಲ್ಲಾ ವಾಸ್ತವಿಕತೆಗೆ ಹತ್ತಿರವಿರುವುದನ್ನು, ಸಾದಿಸಬಹುದಾಗಿರುವುದನಷ್ಟೆ ನೀಡುವ ಭರವಸೆ ಮಾಡುತ್ತಾನೆ. ಕಲ್ಪನೆ ಮತ್ತು ಭರವಸೆಗಳನ್ನು ಸಮರ್ಪಕವಾಗಿ ವಿಂಗಡಿಸಿ ನನ್ನಿಂದ ನಿನಗೇನು ಸಿಗುವುದೆಂಬುವುದನ್ನು ವಾಸ್ತವಿಕತೆಗೆ ಹತ್ತಿರ ಇರುವಂತೆ ನಿವೇದಿಸಬೇಕಲ್ಲವೆ? ಅವಕಾಶ ಸಿಕ್ಕಿದರೆ ಈ ಹಾಡು ಕೇಳು. ಇರು, ಈ ಹಾಡನ್ನೇ ನಿನಗೆ ನನ್ನ ಪ್ರೀತಿಯ ಕಾಣಿಕೆಯಾಗಿ ಕೊಡಲೆ? ಇಲ್ಲ, ನೀನೊಪ್ಪುವುದಾದರೆ, ನಿನಗಾಗಿ ನಾನೇ ಈ ಹಾಡು ಹಾಡಲೆ ನಿನ್ನೆದುರು ನಿಂತು?

ಹಾಂ, ಈವಾಗ ನೆನಪಾಯ್ತು ನೋಡು, ಗೋಕರ್ಣಕ್ಕೆ ಹೋಗಿದ್ದಾಗ, ಕಡಲ ಕಿನಾರೆಯಲ್ಲಿ ಕಣ್ಣಿಗೆ ಕಾಣಸಿಕ್ಕ ಕೆಲವೊಂದು (ಸುಂದರವಾಗಿದೆ ಎಂದು ಎತ್ತಿರೋದು) ಕಪ್ಪೆ ಚಿಪ್ಪು, ಮರಿ ಶಂಖದ ಚಿಪ್ಪು ಎಲ್ಲವನ್ನೂ ಎತ್ತಿಟ್ಟುಕೊಂಡೆ. ಅದರಲ್ಲಿ ಒಂದಿಷ್ಟು ನನ್ನ ತಂಗಿಗೆ ಮತ್ತೆ ನಿನಗೆ ಅಂತ ತೆಗೆದಿಟ್ಟಿದೇನೆ. ನಮ್ಮ ಮನಸ್ಸಿಗೆ ಹಿಡಿಸಿದ ವಸ್ತುಗಳನ್ನು ಪ್ರೀತಿಯಿಂದ ನಮಗಿಷ್ಟವಾದವರಿಗೆ ಕೊಡುವುದರಲ್ಲಿ ಅದೇನೋ ಅರಿವಿಗೆ ಬರದ ಸಂತೋಷ. ನಾನವುಗಳನ್ನು ನಿನ್ನ ಕೈ ಮೇಲೆ ಇಟ್ಟರೆ, ಬೇಡವೆನ್ನದೆ ಪ್ರೀತಿಯಿಂದ ತೆಗೆದೆಕೊಳ್ಳುತ್ತೀಯ ಎಂದು ಭರವಸೆ. ಭರವಸೆ, ನಂಬಿಕೆಗಳ ಮೇಲಲ್ಲವೆ ನಮ್ಮ ಜೀವನ ನಡೆಯುವುದು!

ಭಾವನೆಗಳ ಹಂದರಕ್ಕೆ ಬಿದ್ದ ನನಗೆ ಬಿಡುಗಡೆಯ ಸ್ವಾತಂತ್ರ್ಯ ಬೇಕಿನಿಸಿದಾಗ ಸಿಕ್ಕಿದ್ದೇ ಈ ಹಾಳೆ ಮತ್ತೀ ಪೆನ್ನು. ಮನಸಿನ ಹಾಳೆಗಳಲ್ಲಿ ಗೀಚಿರುವುದನ್ನೆಲ್ಲ ಇಲ್ಲಿ ಗೀಚಿದರೆ ಈತ ಹುಚ್ಚನಿರಬಹುದೆಂದು ನೀನು ನಿರ್ಧರಿಸಬಹುದಾದ ಭಯ ಕಣೇ ನನಗೆ! ಪ್ರಾಮಾಣಿಕನಲ್ಲ ನನ್ನ ನಲ್ಲನಾಗ ಬಯಸುವವನು ಎಂದು ತಿರಸ್ಕರಿಸಬೇಡ! ನನ್ನ ಯಾಕೆ, ಹೇಗೆಗಳಿಗೆ ಉತ್ತರವಿಲ್ಲ ನನ್ನಲ್ಲಿ. ನಿನ್ನ ಯಾಕೆ, ಹೇಗೆಗಳಿಗೆ ನಾ ಹೇಗೆ ಉತ್ತರಿಸಲಿ? ಏನು ಅನ್ನುವುದಕಷ್ಟೆ ಉತ್ತರವಿದೆ.
ಹೌದು, ನಾನು ನಿನ್ನನ್ನು ಪ್ರೀತಿಸ್ತಿದ್ದೀನಿ ಕಣೆ, ಒಪ್ಕೊತಿಯೇನೆ ನನ್ನ ನೀನು? ಇಲ್ಲ ಅನ್ನುವಷ್ಟು ಅಧಿಕಾರವಿದೆ ನಿನಗೆ. ಆದರೂ ನೀನು ನನ್ನ ಪ್ರೀತಿಯನ್ನು ಒಪ್ಪಿ, ನನ್ನ ಕೈ ಹಿಡಿಯುವುದನ್ನು ಕಾಯುತ್ತಿದ್ದೇನೆ. ನನ್ನ ಮುಂದಿನ ಕನಸನ್ನು ನನಸಾಗುವ, ಅದಕ್ಕೊಂದು ರೂಪ ಕೊಡುವ ಗೆಳತಿಯಾಗಿ ಬರುವೆಯಾ?

ಕಣ್ಣ ರೆಪ್ಪೆಯಂತೆ ನಿನ್ನ ಕಾಯದಿರಬಹುದು
ಕಂಬನಿ ತುಂಬಿದ ಕಣ್ಣೊರೆಸೊ ಕೈಯಾಗುವೆ

ಮರದಂತೆ ತಂಪು ನೆರಳನೀಯದಿರಬಹುದು
ಉರಿಬಿಸಿಲಿಗೆ ನಿನ್ನ ಹಿಂಬಾಲಿಸುವ ನೆರಳಾಗುವೆ

ಚಂದಿರನಂತೆ ಹೊಂಬೆಳಕನೆರೆಯದಿರಬಹುದು
ದೀಪದಂತೆ ನಿನ್ನ ಬಾಳ ಅನುದಿನ ಬೆಳಗುವೆ

ನಿನ್ನ ಹೇಗೆ, ಯಾಕೆಗಳಿಗೆ ಉತ್ತರವಿಲ್ಲದಿರಬಹುದು
ಅರಿವಿಗೆ ಸಿಗುತ್ತಿರುವುದೊಂದೆ, ನಾನಿನ್ನ ಪ್ರೀತಿಸುತ್ತಿರುವೆ


ತುಂಬು ಪ್ರೀತಿಯಿಂದ,
ನಿನ್ನ ನಲ್ಲನಾಗ ಬಯಸುವ
ನಿನ್ನಿನಿಯ


ದಿನಾಂಕ: ಸೆಪ್ಟಂಬರ್ ೨೩, ೨೦೦೭

Friday, January 2, 2009

ಕರ್ಣ - ಕರ್ಣಗಳಿಗೆ ತಲುಪದ ಮಾತು

ದಿನಾಂಕ: ಜುಲೈ ೩೦, ೨೦೦೭

ಕರ್ಣ - ಕರ್ಣಗಳಿಗೆ ತಲುಪದ ಮಾತು

ಗಂಗಾ ನದಿಯ ಮೆಟ್ಟಿಲಲ್ಲಿ ನೀರಿಗೆ ಕಾಲುಗಳನ್ನು ಇಳಿಬಿಟ್ಟು ಕೂತಿದ್ದ ಕರ್ಣನ ಕಾಲುಗಳಿಗೆ ತಣ್ಣಗಿನ ಅನುಭವವಾದರೂ ಮನಸ್ಸು ಯೋಚನೆಗಳ ಲಹರಿಗಳಿಂದ ಬಿಸಿಯೇರುತ್ತಿತ್ತು. ಸಖ ಸುಯೋಧನನ ಋಣಭಾರದಿಂದ ಮುಕ್ತನಾಗುವುದೊಂದೇ ನನ್ನ ಜೀವನದ ಮುಖ್ಯ ಧ್ಯೇಯವೆಂದು ಇಷ್ಟುದಿನ ತಿಳಿದು ಬದುಕುತ್ತಿದ್ದ ನನಗೆ ಇಂದ್ಯಾಕೆ ಹೀಗಾಗುತ್ತಿದೆ? ಬಿಡಬಾರದಿತ್ತು, ಅನಾವಶ್ಯಕವಾಗಿ ಭಾವನೆಗಳನ್ನು ಸೃಷ್ಟಿಸಲು ನಾನ್ಯಾಕೆ ಎಡೆಮಾಡಿಕೊಟ್ಟೆ ಅವರಿಗೆಲ್ಲ? ನಾನು, ನನ್ನ ಹುಟ್ಟು, ನನ್ನ ಬದುಕು, ನನ್ನ ಸಂಸಾರ, ಮಾತೆ ರಾಧೆ ನತ್ತು ಪ್ರಿಯ ಸಖ ಸುಯೋಧನ ಇವೆಲ್ಲದರ ಜೊತೆ ನನ್ನದೇ ಆದ ಪ್ರಪಂಚದಲ್ಲಿ ಬದುಕುತ್ತಿರಲಿಲ್ಲವೆ? ಹೌದು, ನಡು ಪಾಂಡವ, ಆ ಅರ್ಜುನನನ್ನು ರಣರಂಗದಲ್ಲಿ ಎದುರಿಸಿ, ಸಾಯಿಸಬೇಕೆಂಬ ಮಹದಾಸೆ ಇತ್ತಲ್ಲ, ಇನ್ನೂ ಇದೆ! ಆದರೂ ಇವತ್ತು ಒಂದು ನಿರ್ದಿಷ್ಟವಾದ ನಿರ್ಧಾರಕ್ಕೆ ಬರಲು ಯಾಕೆ ಆಗುತ್ತಿಲ್ಲ?

ಮೊದಲು ಆ ಕೃಷ್ಣ ಬಂದ, ಅದಷ್ಟು ದೂರ ಕರೆದೊಯ್ದು "ಕರ್ಣ, ನೀನು ತಿಳಿದಂತೆ ನೀನು ರಾಧೆಯ ಹುಟ್ಟುಮಗನಲ್ಲ. ಸೂರ್ಯೋದಯದ ಸಮಯ ಗಂಗೆಗೆ ನೀರು ತರಲು ಹೋದ ರಾಧೆಗೆ ನದಿಯಲ್ಲಿ ತೇಲಿ ಬಂದು ಸಿಕ್ಕಿದ ಮಗು ನೀನು. ನಿನ್ನ ಹಡೆದಮ್ಮ, ನೀನು ದ್ವೇಷಿಸುತ್ತಿರುವ ಪಾಂಡವರ ತಾಯಿ ಕುಂತಿ. ಮದುವೆಗೆ ಮೊದಲು ದುರ್ವಾಸ ಮುನಿಗಳ ಕೃಪೆಯಿಂದ ಜನಿಸಿದ ಮಗು ನೀನು. ಲೋಕದ ಅಂಜಿಕೆಗೆ ಬಲಿಯಾಗಿ ನಿನ್ನನ್ನು ನದಿ ನೀರಿನಲ್ಲಿ ತೇಲಿ ಬಿಟ್ಟಿದ್ದಳು ಅಂದು ಅವಳು. ನಿನಗಾಗಿ ಅವಳು ಪಟ್ಟ ವೇದನೆ, ಅನುಭವಿಸಿದ ನೋವು ಯಾರಿಗೂ ತಿಳಿದಿಲ್ಲ. ನಿನ್ನ ಸಹೋದರರನ್ನೇ ಸಾಯಿಸುವ ಶಪತ ಹೊತ್ತು ನಿನ್ನ ಹೆತ್ತಮ್ಮನ ಕರುಳ ಕತ್ತರಿಸುವ ಮಗನಾಗುವೆಯ ನೀನು?" ಇನ್ನೂ ಎನೇನೋ ಹೇಳುತ್ತಿದ್ದನಲ್ಲ ಅವನು! ಅವನ ನಾಟಕಗಳ ಅರಿವು ಮೊದಲೇ ಆಗಿದ್ದರಿಂದಲ್ಲವೆ ನಾನು ಹಾಗೆ ಎದ್ದು ಬಂದಿದ್ದು. ಮತ್ಯಾಕೆ ಕಳುಹಿಸಿದ ಆಕೆಯನ್ನು ನನ್ನ ಬಳಿಗೆ? ಅದೂ ಕೂಡ ಪ್ರತಿನಿತ್ಯ ನಾನು ಮಾಡುವ ಸೂರ್ಯನಮಸ್ಕಾರದ ವೇಳೆ? ಕರ್ಣ ಮಹಾದಾನಿ, ಕೇಳಿದ್ದನ್ನು ಇಲ್ಲ ಅನ್ನುವ ಮಾತೇ ಇಲ್ಲ ಅವನಲ್ಲಿ ಎಂದು ಜನರೆಲ್ಲಾ ಆಡಿಕೊಳ್ಳುವಾಗ ನನಗೂ ಹೆಮ್ಮೆ ಆಗುತ್ತಿರಲಿಲ್ಲವೆ? ಅದು ಅಹಂಕಾರವಾಗಿ ಬದಲಾಗಿತ್ತೆ? ಸುಯೋಧನನ ಆಸ್ತಾನದಲ್ಲಿರುವ ಎಲ್ಲಾ ಹಿರಿಯರಿಗೆ, ಕರ್ಣ ಎಂದರೆ ಮಹಾ ಅಹಂಕಾರಿ ಎಂದೇ ಅಲ್ಲವೆ!

ಸೂರ್ಯ ಹುಟ್ಟುವ ಒಂದು ಗಳಿಗೆ ಮೊದಲು ಗಂಗೆಯಲ್ಲಿ ಮುಳುಗಿ ಜಳಕ ಮಾಡಿ, ಉದಯಿಸುತ್ತಿರುವ ಸೂರ್ಯನಿಗೆ ಆರ್ಘ್ಯ ಅರ್ಪಿಸಿ ಹಿಂದಿರುಗುವ ಸಮಯದಲ್ಲಿ ದೂರದಲ್ಲಿ ಯಾರೋ ಹೆಣ್ಣು ನದಿಯ ದಡದಲ್ಲಿ ನಿಂತಂತೆ ಕಾಣಿಸಿತ್ತಲ್ಲ. ನಾನ್ಯಕೆ ಅವಳನ್ನು ಕುಂತಿಯೆಂದು ಗುರುತಿಸಿ ಬೇರೆ ದಾರಿಯಲ್ಲಿ ಹೋಗಲಿಲ್ಲ? ನನಗೂ ಅವಳನ್ನು ಒಮ್ಮೆ ಅಪಾದಮಸ್ತಕವಾಗಿ ಕಣ್ಣು ತುಂಬಾ ನೋಡುವ ಆಸೆ ಇತ್ತೆ? "ಮಗು ಕರ್ಣ, ನಿನ್ನ ಜೊತೆ ಮಾತನಾಡಬೇಕು ನನಗೆ" ಎಂದು ದೂರದಲ್ಲೆ ನಿಂತು ಹೇಳಿದ್ದಳಲ್ಲ. "ನನ್ನಲೇನು ಮಾತು ನಿನಗೆ" ಎಂದು ನಾನ್ಯಾಕೆ ಹೊರಟು ಹೋಗಲಿಲ್ಲ! ಮತ್ತದೇ ಮಾತುಗಳು, ಕೃಷ್ಣ ಹೇಳಿದ್ದ ಮಾತುಗಳು, ಅದು ಬಿಡಿ ಬಿಡಿಯಾಗಿ ಕಷ್ಟಪಟ್ಟು ಹೇಳುತ್ತಿದ್ದಳು. "ನೀನು ಹೇಳುತ್ತಿರುವುದೆಲ್ಲಾ ಸುಳ್ಳು, ನಾನೇ ನಿನ್ನ ಮಗನಾಗಿದ್ದರೆ ನಿನ್ನ ಗಂಡ ಸತ್ತ ನಂತರ ಹಸ್ತಿನಾವತಿಗೆ ಬಂದಾಗ ಯಾಕೆ ನನ್ನನ್ನು ಜೊತೆಯಲ್ಲೇ ಕರೆದುಕೊಂಡು ಹೋಗಲಿಲ್ಲ?" ನನ್ನ ಪ್ರಶ್ನೆಗೆ ಉತ್ತರಿಸಲೇ ಇಲ್ಲ ಅವಳು ಕೊನೆತನಕ. "ವತ್ಸಾ, ಪಾಂಡವರೈವರಲ್ಲಿ ನೀನು ಆರನೆಯವನಾಗಿ ಜೊತೆಗಿರು. ನಿನಗೆ ಪಟ್ಟಕಟ್ಟಿ ನಿನ್ನ ಸೇನಾಧಿಪತಿಗಳಾಗಿ ಅವರು ನಿನ್ನನ್ನು ಅನುನಯಿಸಿ ಬದುಕುತ್ತಾರೆ" ಎಂದಾಗ, "ಅಸಾಧ್ಯ, ಸುಯೋಧನನಿಗೆಂದೂ ಎರಡು ಬಗೆಯೆನು ನಾನು" ಎಷ್ಟು ಖಡಾಖಂಡಿತವಾಗಿ ಹೇಳಿದ್ದೆ. ಅವಳು ಭಯಪಟ್ಟಿರಬೇಕು ನನ್ನ ಬಿರುಸಿನ ಉತ್ತರಕ್ಕೆ! ಇನ್ನೆರಡು ನಿಮಿಷ ಉಸಿರನ್ನು ಬಿಗಿ ಹಿಡಿದು, ತಿರುಗಿ ಹೊರಟು ಹೋಗುವ ಮುನ್ನ ಕೇಳಿದ್ದೇನು?, "ನಿನ್ನ ತಮ್ಮಂದಿರನ್ನು ರಣಭೂಮಿಯಲ್ಲಿ ಸಾಯಿಸುವುದಿಲ್ಲ ಎಂದು ವಚನ ಕೊಡು ನನಗೆ" ಎಂದು ತನ್ನ ಮಕ್ಕಳ ಪ್ರಾಣಭಿಕ್ಷೆ ಕೇಳಿದ್ದಳಲ್ಲ. ಅವಳಿಗೆ ಆ ಚಾಣಾಕ್ಷ್ಯ ಕೃಷ್ಣನೇ ಹೇಳಿದ್ದಿರಬೇಕು, ಕರ್ಣ ಕೊಡುಗೈ ದಾನಿ, ಅವನನ್ನು ನಮ್ಮ ಪಕ್ಷಕ್ಕೆ ತರಲು ಅಸಾಧ್ಯವಾದರೆ, ಇದನ್ನಾದರೂ ಕೇಳು ಎಂದು. ಅರ್ಜುನನೊಬ್ಬನನ್ನು ಬಿಟ್ಟು ಉಳಿದವರ ಪ್ರಾಣಹಾನಿ ಮಾಡುವುದಿಲ್ಲವೆಂದು ಹೇಳಿದ ನಂತರವಲ್ಲವೇ ಅವಳು ಹೊರಟು ಹೋಗಿದ್ದು.

ಭಾರವಾದ ಹೆಜ್ಜೆಹಾಕಿ ನಡೆಯುತ್ತಿದ್ದ ಅವಳನ್ನು, "ಮಾತೆ" ಎಂದಲ್ಲವೆ ನಾನು ಕೂಗಿ ಕರೆದಿದ್ದು! ನಿಂತು ನನ್ನ ನೋಡಿದವಳ ಮೊಗದಲ್ಲಿ ಅದೇನು ಹೊಸ ಭಾವನೆಗಳ ಜೇನುಗೂಡು. ಅವಳ ಪಾದಗಳ ಮುಟ್ಟಿ ನಮಸ್ಕರಿಸಿದಾಗ ಅದೆಂತಹ ಅನನ್ಯ ಅನುಭವ. ನಡುನೆತ್ತಿ ಮುಟ್ಟಿ ಆಶೀರ್ವದಿಸಿ ಹೊರಟು ಹೋಗಿದ್ದಳು. ತಿರುಗಿ ನೋಡಿದ್ದಳೇನೋ ಮತ್ತೆ, ನನಗೆ ಮತ್ತೊಮ್ಮೆ ನೋಡುವ ಧೈರ್ಯವೆಲ್ಲಿತ್ತು? ಮಹಾಕಲಿ ಎಂದು ಕರೆಸಿಕೊಳ್ಳುತ್ತಿದ್ದ ನಾನ್ಯಾಕೆ ಅಧೀರನಾಗಿದ್ದೆ ಆ ಗಳಿಗೆ? ತಿರುಗಿ ತನ್ನ ಅರಮನೆಗೆ ಹೋಗಲಾರದೆ ಕರ್ಣ ಗಂಗೆಯ ಮಡಿಲಲ್ಲೇ ಕೂತು ನೀರಿನಿಂದ ಮಣ್ಣಿಗೆ ಹೊರಬಿದ್ದ ಮೀನಿನಂತೆ ವಿಲವಿಲನೆ ಒದ್ದಾಡುತ್ತಿದ್ದ. ಮುಂದೇನು ಅನ್ನುವುದು ಭೂತದಂತೆ ಕಾಡಲು ಶುರುಮಾಡಿತು. ತನ್ನ ಇತಿಹಾಸ ತನ್ನನ್ನು ಇಷ್ಟೊಂದು ಇಕ್ಕಟ್ಟಿನ ಬಲೆಯಲ್ಲಿ ಸಿಲುಕಿಸಿದ್ದರೆ, ಹೊರ ಬರುವ ದಾರಿಗಳ ಬಗ್ಗೆ ಯೋಚಿಸುತ್ತಿದ್ದ. ಇರುವ ಎರಡು ದಾರಿಗಳಲ್ಲಿ ಯಾವುದಾದರೂ ಒಂದನ್ನು ಹಿಡಿದರೂ ಇನ್ನೊಬ್ಬರಿಗೆ ಅನ್ಯಾಯ, ಕರ್ತವ್ಯಹೀನನಾಗಬೇಕು ನಾನು. ಪ್ರೀತಿಯ ಮಳೆಗೆರೆದ ಸಾಕುತಾಯಿ ರಾಧೆಯ ನಿಜಮಗನಾಗಿ, ಬದುಕ ಕೊಟ್ಟ ದೊರೆ, ಪ್ರಿಯ ಸಖನಿಗಾಗಿ ಕಾದಲೇ? ಅಥವಾ ಮಮತೆಯಿಲ್ಲದೆ ನದಿಯಲ್ಲಿ ಹರಿಯ ಬಿಟ್ಟ ಹೆತ್ತಮ್ಮನ ಕರುಳಬಳ್ಳಿಗಳ ಜೊತೆಗೂಡಲೇ? ಇಲ್ಲ, ನನಗೆ ಹಿಂದು, ಇಂದು, ಮತ್ತು ಮುಂದು ಎಂದೆಂದೂ ಈ ಸುಯೋಧನನೇ ಎಂದು ಗಟ್ಟಿ ಮನಸ್ಸು ಮಾಡಿ ಅರಮನೆಯತ್ತ ತೆರಳಿದ ಕರ್ಣ.

ಹುಟ್ಟಿನ ಕಹಿ ಸತ್ಯ ಕಾಡಿದ್ದು ಇನ್ನೇನು ಯುದ್ದ ನಡೆಯಲು ಎರಡು ಮೂರು ದಿನಗಳಿರುವಾಗ! ರಾತ್ರಿಯ ಭೋಜನ ಮುಗಿಸಿ ಮತ್ತೆ ಗಂಗೆಯತ್ತ ಹೆಜ್ಜೆ ಹಾಕಿದ ಕರ್ಣ. ಸುಯೋಧನನಿಗಾಗಿ ಹೋರಾಡುವೆನೆಂದು ಗಟ್ಟಿ ಮನಸ್ಸು ಮಾಡಿದ್ದರೆ, ಮಂಜಿನಂತೆ ಮೆಲ್ಲ ಮೆಲ್ಲನೆ ಅವನ ನಿರ್ಧಾರ ಕರಗುವಂತೆ ಭಾಸವಾಗುತ್ತಿತ್ತು. ಮತ್ತೆ ಮನಸ್ಸು ಕುಂತಿ, ಪಾಂಡವರತ್ತ ಹೊರಳಿತು. ಅದೆಷ್ಟು ನಯ, ವಿನಯ, ಸಂಯಮ ಪಾಂಡವರಿಗೆ! ಹಾಗೆ ಸಾಕಿದ್ದಳಂತೆ ಕುಂತಿ, ಮೊದಲು ಪಾಂಡು ರಾಜನ ವಾನಪ್ರಸ್ತ, ಪತಿಯ ಮರಣದ ನಂತರ ಹಸ್ತಿನಾವತಿ, ಅರಗಿನ ಅರಮನೆ, ಮತ್ತೆ ಕೌರವರಿಂದ ಅಡಗಿಕೊಂಡು ಅದಷ್ಟು ದಿನ ಕಾಡಿನಲ್ಲಿ, ಪಾಂಚಾಲದಲ್ಲಿ ವಾಸ. ಕಣ್ಣಿಗೆ ಎಣ್ಣೆ ಹಚ್ಚಿ ಮಕ್ಕಳನ್ನು ಸರಿ-ತಪ್ಪುಗಳ ಬಗ್ಗೆ ತಿಳಿ ಹೇಳಿ, ಒಗ್ಗಟ್ಟು, ಧರ್ಮ, ನೀತಿ, ನಿಯಮ, ಗೌರವ, ಭಕ್ತಿ ಎಲ್ಲವನ್ನೂ ಕಲಿಸಿದ್ದಳಂತೆ. ಅವರೆಷ್ಟು ಪ್ರಸಿದ್ಧಿ ಪಡೆದಿದ್ದರೆಂದರೆ ಮಹಾಪತಿವೃತೆ, ಕೌರವರ ಹಡೆದಬ್ಬೆ, ಹಸ್ತಿನಾವತಿಯ ಮಹಾರಾಣಿ ಗಾಂಧಾರಿಗೂ ಇರಲಿಲ್ಲವೆ ಮತ್ಸರ, ಹೊಟ್ಟೆಕಿಚ್ಚು, ಕುಂತಿಯ ಮೇಲೆ, ಅವಳ ಮಕ್ಕಳ ಮೇಲೆ? ಕುಂತಿಯ ಜೇಷ್ಟಪುತ್ರ ನಾನಾಗಿದ್ದರೆ ನಾನ್ಯಾಕೆ ಪಾಂಡವರಂತಾಗಲಿಲ್ಲ? ನನಗೆ ನಿರ್ದಿಷ್ಟವಾದ ಒಂದು ವ್ಯಕ್ತಿತ್ವ ಇತ್ತೆ? ದ್ರೌಪದಿಯನ್ನು ಸಹೋದರೈವರು ವರಿಸಿದ ನಂತರ ಯಾವ ಹೆಣ್ಣನ್ನೂ ಕಣ್ಣೆತ್ತಿ ನೋಡಿದವರಲ್ಲವಂತೆ ಈ ಪಾಂಡವರು, ಅರ್ಜುನನ್ನು ಹೊರತುಪಡಿಸಿ. ಮದುವೆ ಮೊದಲೂ ಅದೇ ರೀತಿ ಇದ್ದರಂತೆ, ಭೀಮನನ್ನು ಹೊರತುಪಡಿಸಿ. ಹಿಡಿಂಬವನದಲ್ಲಿ ಮದುವೆ ಆಗಲೇಬೇಕಾದ ಪ್ರಸಂಗ ಒದಗಿಬಂದಾಗ ಕುಂತಿಯೇ ಭೀಮನನ್ನು ಒಪ್ಪಿಸಿ ಮದುವೆ ಮಾಡಿಸಿದ್ದಳೆಂಬ ಸುದ್ದಿಯಲ್ಲವೆ ನಮಗೆ ಬಂದಿದ್ದು.

ನದಿ ನೀರಿನಲ್ಲಿ ಈಜುತ್ತಿದ್ದ ಮೀನುಗಳು ಗಾಳಿ ಸೇವನೆಗೆಂದು ಪುಳಕ್ ಪುಳಕ್ ಎಂದು ನೀರಿನ ಮೇಲ್ಮೆಗೆ ಜಿಗಿಯುತ್ತಿದ್ದ ಸದ್ದಿಗೆ ಅವನ ಮನಸ್ಸಿನ ಬಂಡಿಗೆ ಕಡಿವಾಣ ಬಿತ್ತು. ಆವಾಗಲೇ ಅವನಿಗೆ ತನ್ನ ಯೋಚನಾಲಹರಿ ಯಾವ ಕಡೆ ಹೋಗುತ್ತಿದೆ ಅನ್ನುವ ಅರಿವಾಯಿತು. ಇಹದ ಅರಿವಿನ ಪ್ರಜ್ಞೆ ಮನಸ್ಸಿಗಾದಾಗ ಮತ್ತೆ ತನ್ನ ಹುಟ್ಟಿನ ಬಗ್ಗೆ ಜಿಜ್ನಾಸೆ ಅವನಿಗಾಯಿತು. ಈ ಗಂಗಾ ನದಿಯ ತಡದಲ್ಲಿ ತಾನು ಅಜನ್ಮ ಶತ್ರುವೆಂದೇ ಭಾವಿಸಿರುವ ಅರ್ಜುನನ ತಾಯೇ ತನ್ನ ಹೆತ್ತಮ್ಮ ಎಂಬ ಸತ್ಯ ತಿಳಿದಾಗ ಗಂಗೆ ತನ್ನನ್ನು ಅವಳ ಒಡಲಾಳದಲ್ಲಿ ಪ್ರವಾಹದ ಜೊತೆಗೆ ಸೆಳೆದೊಯ್ಯಬಾರದೆ ಅನ್ನಿಸಿತ್ತಲ್ಲ. ಸಾಕಿದಮ್ಮ ರಾಧೆಯೇ ನನ್ನ ಹೆತ್ತಮ್ಮ ಯಾಕಾಗಬಾರದಿತ್ತು? ರಾಧೆಗೆ ಇದೇ ಗಂಗಾ ನದಿಯಲ್ಲಿ ಸಿಕ್ಕಿದ್ದೆನಂತೆ ನಾನು. ಮರದ ತೊಟ್ಟಿಲಲ್ಲಿ ತೇಲುತ್ತ ಬರುತ್ತಿದ್ದ ನನ್ನನ್ನು ಅಪ್ಪ ದಡ ಸೇರಿಸಿ, ಅಮ್ಮನ ಕೈಯಲ್ಲಿಟ್ಟಿದ್ದನಂತೆ. ಸೂತಕುಲದವರ ಮನೆ ಸೇರಿದ ನಾನು, ಅಪ್ಪ ಅಮ್ಮನಿಗೆ ಸೂರ್ಯಪುತ್ರ, ನನ್ನ ಅಭ್ಯುದಯ ಸಹಿಸಲಾಗದವರಿಗೆ ಸೂತಪುತ್ರ. ಎಲ್ಲಿಯ ಸೂರ್ಯಪುತ್ರ, ಎಲ್ಲಿಯ ಸೂತಪುತ್ರ? ಈಗ ನಾನು ಕುಂತಿ ಪುತ್ರನೆ? ಗಂಗೆ ನಡುಗುವಂತೆ ಗಹಗಹಿಸಿ ನಕ್ಕ ಕರ್ಣ! ಅವನ ನಗುವಿನ ಜೊತೆ ಅವನೊಳಗಿನ ಅವಮಾನದ ಸುಳಿ, ಸೇಡು, ಪ್ರತೀಕಾರದ ಚಿಲುಮೆ ಮತ್ತೆ ಕುಡಿಯೊಡೆಯಿತು. ನೋಡು ನೋಡುತ್ತಿದ್ದಂತೆ ಅದು ಹೆಮ್ಮರವಾಗಿ ಬೆಳೆಯಿತು. ಇಲ್ಲ, ಇದೆಲ್ಲ ಕೃಷ್ಣನ ತಂತ್ರ, ಪಾಂಡವರಿಗೆ ಮತ್ತೆ ಹಸ್ತಿನಾವತಿ ದೊರಕಲಿ ಎಂದು ಈ ಕೃಷ್ಣ ಮತ್ತು ಕುಂತಿ ಸುಳ್ಳಿನ ಸಾಮ್ರಾಜ್ಯ ಸೃಷ್ಟಿಸಿ ನನಗೆ ಮೋಸ ಮಾಡುತ್ತಿದ್ದಾರೆ! ಹೇಗೆ ಮರೆಯಲಿ ನಾನು ಪಾಂಡವರು ಮತ್ತು ಆ ಪಾಂಚಾಲಿ ಮಾಡಿದ ಅವಮಾನವ? ಒಮ್ಮೆಯಲ್ಲ, ಮೂರು ಸಾರಿ! ಅರವತ್ತಕ್ಕೂ ಮಿಕ್ಕಿದ ಇಳಿವಯಸ್ಸಿನಲ್ಲೂ ಅವನ ರಕ್ತ ಕೊತಕೊತನೆ ಕುದಿಯಹತ್ತಿತು.

ಸುಯೋಧನ, ನಾನಿಟ್ಟ ಹೆಸರಲ್ಲವೆ ಅದು! ಲೋಕಕ್ಕೆಲ್ಲಾ ದುರ್ಯೋಧನ, ಕೌರವನೆಂದೇ ಪ್ರಸಿದ್ದಿ ಪಡೆದಿದ್ದ ನನ್ನ ಸಖ ಸುಯೋಧನ ನನಗೆ. ಅರಮನೆಯಲ್ಲಿ, ರಾಜಸಭೆಯಲ್ಲಿ, ಹಸ್ತಿನಾವತಿಯ ಪ್ರಜೆಗಳಲ್ಲಿ ಅವನಿಗಿರುವ ಗೌರವಕ್ಕಿಂತ, ಭಯವೇ ಅಧಿಕವಾಗಿತ್ತಲ್ಲ! ಕುರುಕುಲದ ಯುವರಾಜರೆಲ್ಲಾ ತಮ್ಮ ಯುದ್ದ ಕೌಶಲ್ಯ ಪ್ರದರ್ಶಿಸುತ್ತಿರುವಾಗ ನನಗಾದ ಅವಮಾನದಲ್ಲೂ ನನ್ನನ್ನು ಎದೆಯುಬ್ಬಿಸಿ ನಡೆವಂತೆ ಮಾಡಿದನಲ್ಲ ಅವನು. ಏನೆಂದರು, ಸೂತಪುತ್ರನೆಂದಲ್ಲವೆ? ಸಮಸ್ತ ಜನಸಾಗರದಲ್ಲಿ ಅದೆಂತಹ ಅವಮಾನ. ಭೂಮಿ ಬಾಯ್ಬಿಟ್ಟು ನನ್ನನ್ನು ನುಂಗಬಾರದೇ ಅನ್ನಿಸಲಿಲ್ಲವೆ ಆ ಗಳಿಗೆ ನನಗೆ. ಎಲ್ಲರೂ ನನ್ನ ಮೂದಲಿಸುತ್ತಿರುವಾಗಲೇ ಎದ್ದು ಬಂದು ನನ್ನ ಹೆಗಲ ಮೇಲೆ ಅವನ ತೋಳನಿಟ್ಟು ಬರಸೆಳೆದು, "ಕರ್ಣ, ಈ ಕ್ಷಣದಿಂದ ನೀನು ನನ್ನ ಗೆಳೆಯ" ಅಂದು ನನಗೆ ಇನ್ನೊಂದು ಹುಟ್ಟು ಬರುವಂತೆ ಮಾಡಿದ್ದನ್ನಲ್ಲ. ಅಲ್ಲಿಗೆ ಮುಗಿದಿರಲಿಲ್ಲ ನನಗಾದ ಅವಮಾನ, ದ್ರೌಪದಿಯ ಸ್ವಯಂವರದಲ್ಲಿ ಸಮಸ್ತ ಆರ್ಯಕುಲದ ರಾಜರ ಮುಂದೆ, "ಸೂತಪುತ್ರನಿಗೆ ಅವಕಾಶವಿಲ್ಲ, ಸೂತಪುತ್ರನನ್ನು ನಾನು ಮದುವೆಯಾಗಲಾರೆ" ಎಂದು ನನಗೆ ಸ್ಪರ್ಧಿಸುವ ಅರ್ಹತೆಯನ್ನೇ ಇಲ್ಲವಾಗಿಸಿದ್ದಳಲ್ಲಾ ಆ ದ್ರೌಪದಿ! ಕರ್ಣನಿಗೆ ಮೈ ಪರಚಿಕೊಳ್ಳುವಷ್ಟು ಕೋಪ ಬರುತಿತ್ತು ಪಾಂಡವರು ಮತ್ತು ದ್ರೌಪದಿಯ ಮೇಲೆ.

ನನ್ನ ಬಗ್ಗೆ ಅವನಿಗೆಷ್ಟು ನಂಬಿಕೆ, ಆತ್ಮವಿಶ್ವಾಸ ಸುಯೋಧನನಿಗೆ. ಅಂಥಾ ದೊರೆಯನ್ನು ಹೀಗೆಳೆದಿದ್ದನಲ್ಲಾ ಕೃಷ್ಣ. "ಕರ್ಣ, ನಿನ್ನ ಶೌರ್ಯ, ಪರಾಕ್ರಮವನ್ನು ತನ್ನ ಅಧಿಕಾರ ದಾಹಕ್ಕಾಗಿ ಉಪಯೋಗಿಸಿಕೊಳ್ಳುತ್ತಿದ್ದಾನೆ ಅವನು. ಪಾಂಡವರನ್ನು ಕಪಟಿ ಶಕುನಿಯ ನೆರವಿನಿಂದ ಪಗಡೆಯಾಟದಲ್ಲಿ ಕೆಡವಿ ಮೋಸ ಮಾಡಿದಂತೆ, ನಿನ್ನನ್ನು ಪಗಡೆಯಾಟದ ದಾಳವಾಗಿ ಉಪಯೋಗಿಸಿಕೊಳ್ಳುತ್ತಿದ್ದನೆ ದುರ್ಯೋಧನ". ಎಂಥಾ ಮಾತುಗಳು, ಸತ್ಯಕ್ಕೆ ದೂರವಾದ, ನಂಬಿಕೆಗೆ ಅರ್ಹವಲ್ಲದವು. ಜೇನು ತುಪ್ಪದಂತೆ ಸಿಹಿಯಾಗಿ ಸವಿಯಾಗಿರುವ ನಮ್ಮ ಗೆಳೆತನಕ್ಕೆ ಹುಳಿ ಹಿಂಡುವ ಪ್ರಯತ್ನ ಕೃಷ್ಣನದ್ದು.

ಉರಿ ಮುಖ ಮಾಡಿಕೊಂಡು ಕರ್ಣ ಕತ್ತಲಲ್ಲಿ ಬೆಳಕ ಹುಡುಕ ಹೊರಟವನಂತೆ ದಾಪುಗಾಲು ಹಾಕುತ್ತ ಅವನರಮನೆಗೆ ಹೊರಟ. ನಿದ್ದೆಯ ಜೊಂಪಿನಿಂದ ಎಳೆಯುತ್ತಿದ್ದ ಕಣ್ಣುಗಳಿಂದ ತನ್ನ ದೇಹ, ಮನಸ್ಸಿಗೆರಡೂ ವಿಶ್ರಾಂತಿಯ ಅಗತ್ಯವಿದೆಯೆಂಬುದನ್ನರಿತು ತನ್ನ ಹಾಸಿಗೆಯಲ್ಲಿ ಪವಡಿಸಿದ. "ರಾಜಾಧಿರಾಜ, ರಾಜ ಮಹಾರಾಜ, ಮಹಾಪರಾಕ್ರಮಿ, ಪಾಂಡು ಜೇಷ್ಟಪುತ್ರ, ಹಸ್ತಿನಾವತಿ ಒಡೆಯ, ಕುರುಕುಲೊದ್ಧಾರಕ ಕರ್ಣ ಮಹಾರಾಜರಿಗೆ ಜೈ" ಎಲ್ಲೆಲ್ಲೂ ಜಯಕಾರ, ಜೊತೆಗೆ ವಾದ್ಯಗೋಷ್ಟಿ, ಕೊಂಬು ನಿನಾದ. ಹಸ್ತಿನಾವತಿಯಲ್ಲಿ ಹಬ್ಬದ ಸಡಗರ. ರಾಜಮಾರ್ಗದಲ್ಲಿ ರಾಜಠೀವಿಯಲ್ಲಿ ನಡೆದು ಬರುತ್ತಿದ್ದರೆ ನನ್ನ ಹಿಂದೆ ನನ್ನ ಐದು ಜನ ಸಹೋದರರು. ರಾಜಗಾಂಭಿರ್ಯದಲ್ಲಿ ಸಿಂಹಾಸನರೂಡನಾದ ನನಗೆ ಸಮಸ್ತ ಜನಸಾಗರದಿಂದ ಗೌರವ, ಮರ್ಯಾದೆ. ಮಾತೆ ಕುಂತಿಯಿಂದ ಆಶೀರ್ವಾದ, ಹೆಮ್ಮೆಯಿಂದ ಎದೆಯುಬ್ಬಿಸಿ, ಗೌರವಪೂರ್ವಕವಾಗಿ ತಲೆ ಬಗ್ಗಿಸಿ, ಹೆಗಲಿಗೆ ಹೆಗಲಾಗಿ ನಿಂತ ತಮ್ಮಂದಿರು. ಮಾತೆಯ ಪಕ್ಕದಲ್ಲಿ ನಿಂತ ದ್ರೌಪದಿಯ ಕಣ್ಣಲ್ಲೂ ನನ್ನ ಮೇಲೆ ಗೌರವ. ಸಂತೋಷದಿಂದ ಉಬ್ಬುತ್ತಿರುವ ನಾನು. ರಾಜ್ಯಸಭೆ ಮುಗಿಸಿ ಅಂತಃಪುರಕ್ಕೆ ಹೋದ ನಂತರ ನಾವೆಲ್ಲ ಕುಳಿತು ಹರಟುತ್ತಿದ್ದರೆ ಅದೆಷ್ಟು ಮಹದಾನಂದ. ಅದೆಷ್ಟು ಪ್ರೀತಿ ಉಕ್ಕಿ ಹರಿದು ಬರುತ್ತಿದೆ ನನ್ನತ್ತ!

ನಡೆಯುತ್ತಿರುವುದೆಲ್ಲಾ ಕನಸ್ಸೆನ್ನುವುದು ತಿಳಿಯಲು ಕರ್ಣನಿಗೆ ಬಹಳ ಸಮಯ ಹಿಡಿಯಲಿಲ್ಲ. ಕನಸು ಮುರಿದು ಬಿದ್ದು ಎಚ್ಚೆತ್ತ ಕರ್ಣನಿಗೆ ಮತ್ತೆ ನಿದ್ದೆ ಹತ್ತಲಿಲ್ಲ. ಮತ್ತೆ ಸಂದಿಗ್ದತೆ. ನನ್ನ ಅಸ್ತಿತ್ವ ಅಲ್ಲಿಯೋ ಅಥವಾ ಇಲ್ಲಿಯೋ ಎನ್ನುವುದು ಯಕ್ಷಪ್ರಶ್ನೆಯಾಗಿಯೇ ಉಳಿಯಿತು. ಅಳಿದುಳಿದ ರಾತ್ರಿಯನ್ನು, ಹಗಲಾಗುವ ತನಕ ನಿದ್ದೆಯಿಲ್ಲದೆ ಕಳೆಯುವಂತಾಯಿತು ಕರ್ಣನಿಗೆ. ನಾಳೆ ನಡೆಯುವ ಯುದ್ದಕ್ಕೆ ಸೈನಿಕರನ್ನು ಹುರಿದುಂಬಿಸಿ, ಸೈನ್ಯವನ್ನು ತಯಾರಿ ಮಾಡಬೇಕು. ರಣರಂಗದಲ್ಲಿ, ಸುಯೋಧನ ನನ್ನಿಂದ ಬಹಳಷ್ಟು ನಿರೀಕ್ಷಿಸುತ್ತಿದ್ದರೆ ಆಶ್ಚರ್ಯವೇನಿಲ್ಲ! ಮುಂದೆ ನಡೆಯುವ ಯುದ್ಧಕ್ಕೆ ಮನಸ್ಸಿನಲ್ಲಿ ತಯಾರಿ ನಡೆಸಿದ ಕರ್ಣ.

ಆ ದಿನ ನಡೆಯಬೇಕಾಗಿದ್ದ ಯುದ್ಧ ಪಾಂಡವ ಪಡೆಯಲ್ಲಿ ನಡೆದ ಹೊಸ ವಿದ್ಯಮಾನದಿಂದ ಮುಂದೂಡಲ್ಪಟ್ಟಿತು. ಬೇಹುಗಾರರನ್ನು ಕರೆದು ವಿಚಾರಿಸಿದಾಗಲಲ್ಲವೆ ನನ್ನರಿವಿಗೆ ಬಂದಿದ್ದು. ರಣರಂಗದಲ್ಲಿ ಹೋರಾಡೆನು ನಾನು ಎಂದು ಹೇಳಿದ ಅರ್ಜುನ ತನ್ನ ರಥದಿಂದ ಕೆಳಗಿಳಿದು ಶಿಬಿರದೊಳಗೆ ಹೋದನಂತೆ. ಇಷ್ಟೆಲ್ಲಾ ನೋವು, ಅವಮಾನ, ಕಷ್ಟಗಳ ನಡುವೆ ಅದೇನು ಜಿಜ್ಞಾಸೆ ಅವನಿಗೆ? ರಾಜ್ಯಕ್ಕಾಗಿ ಯುದ್ಧ ಮಾಡುವುದಿಲ್ಲವೆಂದು, ಪಾರ್ಥನೆಂದು ಕರೆಸಿಕೊಳ್ಳುವ ನನ್ನ ಮೂರನೆಯ ಸಹೋದರ ಅರ್ಜುನ ತನ್ನ ಗಾಂಡೀವವೆಂಬ ಧನುಸ್ಸನ್ನೇ ಎಸೆದಿದ್ದನಂತೆ. ಓರಗೆಯಲ್ಲಿ ನನ್ನ ಅಣ್ಣ ತಮ್ಮಂದಿರಂತಿಹ ಕೌರವರು, ದೊಡ್ಡಜ್ಜ ಪಿತಾಮಹ, ಕಲಿಸಿದ ಗುರು ಕೃಪಾಚಾರ್ಯ ಮತ್ತು ದ್ರೋಣಾಚಾರ್ಯ, ಹಸ್ತಿನಾವತಿಯ ಮಹಾಜನರು, ಅದೆಷ್ಟೋ ಗುರು ಹಿರಿಯರನ್ನು ಕೊಂದು, ಮಾತೆ ಗಾಂದಾರಿ ಮತ್ತು ದೊಡ್ಡಪ್ಪ ಧೃತರಾಷ್ಟ್ರರ ಕರುಳಬಳ್ಳಿಗಳನ್ನೇ ಕೊಯ್ದು ದುಃಖದ ಸಾಗರದಲ್ಲಿ ಮುಳುಗಿಸಿ ಸಿಗುವ ರಾಜ್ಯಭೋಗ ನಮಗ್ಯಾಕೆ ಎಂದು ಸರಿ ತಪ್ಪು, ಧರ್ಮ ಅಧರ್ಮದ ಜಿಜ್ಞಾಸೆಯಲ್ಲಿ ಮುಳುಗಿದ್ದನಂತಲ್ಲ. ನನಗ್ಯಾಕೆ ಯಾವತ್ತು ಸರಿ-ತಪ್ಪು, ಧರ್ಮ-ಅಧರ್ಮಗಳ ಜಿಜ್ನಾಸೆ ಹುಟ್ಟುವುದಿಲ್ಲ? ಇಲ್ಲ, ಹುಟ್ಟುತ್ತದೆ, ನಾನು ಅದನ್ನು ಚಿಗುರಲು ಬಿಟ್ಟಿಲ್ಲ. ಪಾಂಡವರಾರು ನನ್ನಿಂದ ಸಾಯಬಾರದು, ನಾನು ರಣರಂಗದಿಂದ ಹೊರಗುಳಿಯಬೇಕು. ಆದರೆ ಹೇಗೆ? ಒಂದರೆಗಳಿಗೆ ತನ್ನೊಳಗೇ ಯೋಚಿಸುತ್ತಿದ್ದ ಕರ್ಣನಿಗೆ ಮುಂದೆ ಏನು ಮಾಡಬೇಕೆಂಬುದು ಅವನ ಮನಸ್ಸಿನಲ್ಲಿ ಮೂಡಿ ನಿರ್ದಿಷ್ಟ ರೂಪತಾಳಿತು.

ಲೋಕಕ್ಕೆ ತಾನೊಬ್ಬ ಮಹಾರಥಿ, ಮಾತುತಪ್ಪದ ಭೀಷ್ಮ, ಕುರುಕುಲವನ್ನು ಅನಾದಿಕಾಲದಿಂದ ಕಾಪಾಡಿಕೊಂಡು ಬಂದ ದೇಶಭಕ್ತ, ಧರ್ಮ-ಅಧರ್ಮಗಳ ವಿಶ್ಲೇಷಿಸುವಂತ ಬುದ್ಧಿಮತ್ತೆಯಿರುವ ವೇದಾಧ್ಯಾಯನ ಪಾರಾಂಗತನೆಂದು ಸಾದಿಸಿ ತೋರಿಸಿದ್ದ ಭೀಷ್ಮರೆದಿರು, ರಣರಂಗಕ್ಕೆ ಹೊರಡುವ ಮೊದಲು ಉದ್ಧಟತನವೆಂಬಂತೆ ಕೂಗಾಡಬೇಕು ಈ ದಿನ. ಸರಿಯಾದ ಸಮಯಕ್ಕೆ ಕಾಯುತ್ತಾ ನಿಂತಿದ್ದ ಕರ್ಣ. ಭೀಷ್ಮರನ್ನು ಮಹಾಸೇನಾನಿಯೆಂದು ಸುಯೋಧನ ಘೋಷಿಸಿದಾಗ ಅಸಮಾಧಾನದಿಂದ ತಲೆ ಅಲ್ಲಾಡಿಸಿದ, ಎಲ್ಲರಿಗೂ ತಿಳಿಯುವಂತೆ, ಭೀಷ್ಮರನ್ನೂ ಸೇರಿಸಿ. ಮುಂದೆ ಸೇನಾನಿಗಳ ಆಯ್ಕೆ ನಡೆಯುವಾಗ ಮಹಾಸೇನಾನಿಗಳು ಕರ್ಣನ ಹೆಸರನ್ನು ಬಿಟ್ಟುಬಿಟ್ಟರು, ಕರ್ಣ ಊಹಿಸಿದ್ದಂತೆ. ತನಗೆ ಸಿಡಿಮಿಡಿಗೊಳ್ಳಲು ಇದಕ್ಕಿಂತ ಬೇರೆ ಅವಕಾಶ ಬೇಕೇ ಎಂದುಕೊಳ್ಳುತ್ತಾ, ಕರ್ಣ ಜೋರಾಗಿ ಅರಚಿದ "ಗಂಡೆದೆಯ ಗುಂಡಿಗೆಯಿಂದ ಹೋರಾಡಿ ಶತ್ರುಗಳ ಗುಂಡಿಗೆಯನ್ನು ಸಿಗುಳುವ ಈ ಕರ್ಣನಿಗೆ ಅವಮಾನ. ಬಿಲ್ಲಿನಂತೆ ಬಾಗಿರುವ ಈ ಮುದಿಯನಿಗೆ ಬಿಲ್ಲನೆತ್ತಿ, ಬಾಣ ಹೂಡಿ ಶತ್ರುಗಳ ಗುಂಡಿಗೆ ಛೇದಿಸಲು ಸಾಧ್ಯವೆ? ಮಹಾಸೇನಾನಿಯೆನಿಸಿಕೊಂಡ ಇಂಥಾ ಮುದಿ ಸಿಂಹದ ಕೆಳಗೆ ನಾನು ಯುದ್ಧ ಮಾಡಲಾರೆ". ನೆರೆದಿದ್ದ ರಾಜರೆಲ್ಲರ ಎದಿರು ಮಹಾಸೇನಾನಿಯನ್ನು ಧಿಕ್ಕರಿಸಿ ಹೊರನಡೆದ ಕರ್ಣ.

ಮತ್ತೆ ಮನಸ್ಸಿನಲ್ಲಿ ಮಂಥನ, ಮಹಾಸೇನಾನಿಯ ಜೊತೆ ಮುನಿಸು, ಲೋಕ ಕೊಟ್ಟ ಬಿರುದು, ಕರ್ಣ ಅಹಂಕಾರಿ. ಜಗತ್ತಿಗೇನು ಗೊತ್ತು, ನಾನೀಗ ಮೈ-ಮನಸ್ಸೆಲ್ಲಾ ನೋವು ತುಂಬಿಸಿಕೊಂಡು, ಸಂಕಷ್ಟಕ್ಕೆ ಸಿಲುಕಿದ ಗಾಯಾಳುಯೆಂದು. ನಾನ್ಯಾಕೆ ಹೀಗೆ ಮಾಡಿದೆನೆಂದು ಅವರಿಗೆಲ್ಲ ತಿಳಿಯುವ ಅವಶ್ಯಕತೆ ಇಲ್ಲ, ತಿಳಿಯಲೂಬಾರದು. ನನ್ನನ್ನು ಅಹಂಕಾರಿಯೆಂದು ಬಗೆದರೆ ನನ್ನ ಈ ಸಂಕಲ್ಪದ ಕಾರಣ ಮುಚ್ಚಿಹೋಗುತ್ತದೆ, ಅದೇ ಅಲ್ಲವೆ ನನಗೆ ಬೇಕಾಗಿರುವುದು. ಭೀಷ್ಮರು ಮಹಾಸೇನಾನಿಯಾದರೆ, ಹೇಗಾದರೂ ಸುಯೋಧನನನ್ನು ಸಂಧಿಗೊಪ್ಪಿಸಿ ಪಾಂಡವ-ಕೌರವರು ಒಟ್ಟಿಗೆ ರಾಜಿಯಾಗುವಂತೆ ಮಾಡುವರೆಂಬ ನಂಬಿಕೆ ಬೇರೂರಿದೆ ನನ್ನಲ್ಲಿ. ಕುರುಕುಲದ ಪಿತಮಹ ಯುದ್ಧರಂಗದಲ್ಲಿರುವ ತನಕ ನನ್ನ ಮನಸ್ಸಿಗೆ ನೆಮ್ಮದಿಯೆಂದು ತನ್ನಷ್ಟಕ್ಕೆ ತಾನು ಸಮಾಧಾನಗೊಂಡು ತನ್ನ ಶಿಬಿರದಲ್ಲಿ ಉದ್ದಕ್ಕೆ ಮಲಗಿದ ಕರ್ಣ.

ಮತ್ತೆ ಹತ್ತು ದಿನಗಳು ಕಳೆದವು. ಕರ್ಣನ ಮನಸ್ಸಿನ ನೆಮ್ಮದಿ ಕೆಡುವ ಕಾಲ ಕೂಡಿ ಬಂತು! ಭೀಷ್ಮರು ಯುದ್ಧಭೂಮಿಯಲ್ಲೇ ಬಾಣಗಳ ರಾಶಿಯ ಮೇಲೆ ಮಲಗುವಲ್ಲಿ ಕರ್ಣನ ಕೆಟ್ಟದಿನಗಳು ಶುರುವಾದವು. ಪಿತಾಮಹರು ರಣದಲ್ಲಿ ಕಾದಾಡುವ ತನಕ ಪಾಂಡವರು ಆವೇಶದಿಂದ ಹೋರಾಡರು ಹಾಗೂ ಭೀಷ್ಮರಿರುವ ತನಕ ಪಾಂಡವರಿಗೂ ಯಾವ ಕುತ್ತು ಬಾರದು ಎಂದು ನಾನೂ ಕೂಡ ಬಲವಾಗಿ ನಂಬಿರಲಿಲ್ಲವೆ? ಇದೇ ಅಲ್ಲವೆ ಯುದ್ಧದಿಂದ ಹೊರಗುಳಿಯುವ ಈ ನನ್ನ ನಿರ್ಧಾರಕ್ಕೆ ಒಂದು ಅಡಿಪಾಯವಾಗಿದ್ದದ್ದು. ನನ್ನೆಣಿಕೆಯಂತೆ ಭೀಷ್ಮರು ರಣರಂಗದಲ್ಲಿ ಕಾದಾಡಿದ ಕಳೆದ ಹತ್ತು ದಿನಗಳಲ್ಲಿ ಯಾವುದೇ ಮಹತ್ವದ ಘಟನೆ ನಡೆದಿರಲಿಲ್ಲ. ಪಾಂಡವರು ಸರಿಯಾಗಿ ಬಾಣ ಹೂಡಿದ್ದರು ಎಂದರೆ ಅನುಮಾನವೆ. ಅವರಿಗೆಷ್ಟು ಗೌರವ ಪಿತಾಮಹರೆಂದರೆ. ಭೀಮ ಒಂದಿಷ್ಟು ಕೌರವ ಸಹೋದರರನ್ನು ಹಿಡಿದು ಸಾಯಿಸಿದ್ದನೆಂದು ಸುದ್ದಿ. ಅಥಿರಥರಲ್ಲದ ಅವರಿಗೆಲ್ಲಾ ಅಳುವ ವ್ಯವಧಾನ ಸುಯೋಧನನಿಗೆಲ್ಲಿತ್ತು?

ಭೀಷ್ಮರೇಕೆ ಶಿಖಂಡಿಯು ಯುದ್ಧಭೂಮಿಯಲ್ಲಿ ಎದಿರುಗೊಂಡಾಗ ಬಿಲ್ಲನ್ನು ಎಸೆದು ಎದೆಯೊಡ್ಡಿ ನಿಂತರು? ಅವರಿಗೂ ಈ ಯುದ್ಧ ಬೇಡವೆನಿಸಿ, ಪಾಂಡವರ ವಿಜಯ ಬೇಕೆನಿಸಿತ್ತೇನೋ! ಸುಯೋಧನ ತಪ್ಪು ಮಾಡುತ್ತಿದ್ದಾನೆಯೆ? ಇದಕ್ಕೆಲ್ಲ ಯುದ್ಧವಲ್ಲದೆ ಬೇರೆ ದಾರಿಯೇ ಇಲ್ಲವೆ? ಹಿಂದೆ ಬರಲಾರದಷ್ಟು ಮುಂದೆ ನುಗ್ಗಿಯಾಗಿದೆ ನಾವೆಲ್ಲಾ! ಭೀಷ್ಮರು ಯುದ್ಧರಂಗದಿಂದ ಹೊರಗುಳಿದು ನನ್ನನ್ನು ಸಂಕಷ್ಟದ ಇಕ್ಕಟ್ಟಿಗೆ ಬೀಳಿಸಿದರು, ನನ್ನನ್ನು ಉಭಯಸಂಕಟಕ್ಕೆ ಸಿಲುಕಿಸಿದರು. ನಾನೀಗ ರಣರಂಗಕ್ಕೆ ಇಳಿಯಲೇಬೇಕು. ಸುಯೋಧನ ನನ್ನನ್ನು ಮಹಾಸೇನಾನಿ ಮಾಡಿಸಲೂಬಹುದು ಈ ಬಾರಿ. ಮುಂದೆ ಏನು? ಕರ್ಣನಿಗೆ ಪ್ರಶ್ನೆಗಳ ಮೇಲೆ ಪ್ರಶ್ನೆಗಳ ಹೊಡೆತ!

"ಮಹಾರಾಜರ ಕರೆಯಾಗಿದೆ. ತಮಗಾಗಿ ಅವರ ಶಿಬಿರದಲ್ಲಿ ಕಾಯುತ್ತಿದ್ದಾರೆ." ಬಾಗಿಲು ತಳ್ಳಿ ಕರ್ಣನ ಡೇರೆಯೊಳಗೆ ಬಂದ ದೂತ ಕೌರವನ ಆಜ್ಞೆಯನ್ನು ಬಿನ್ನವಿಸಿದ. ಶಿಬಿರದ ಪಕ್ಕದಲ್ಲಿದ್ದ ರಥ ಬೇಡವೆನಿಸಿ ತನ್ನ ಕುದುರೆಯನ್ನೇರಿ ಹೊರಟ. ಕೌರವನ ದೊಡ್ಡ ಶಿಬಿರ ಆಗಲೆ ದುಶ್ಯಾಸನಾದಿ ಅಳಿದುಳಿದ ಕೌರವರು, ದ್ರೋಣ, ಅಶ್ವಾತ್ತಾಮ, ಶಕುನಿ, ಶಲ್ಯ, ಜಯದ್ರಥಾದಿ ಅಥಿರಥರಿಂದ ತುಂಬಿತ್ತು. ಹತ್ತು ದಿನಗಳ ಯುದ್ಧದಲ್ಲಿ ಅನುಭವಿಸಿದ ಸೋಲಿನ ನಿರಾಶೆ, ಕಳೆದುಕೊಂಡ ಆನೆ, ಕುದುರೆ, ಸೈನ್ಯವೆಲ್ಲದರ ಕರಿ ಛಾಯೆ ಎಲ್ಲರ ಮುಖದಲ್ಲಿ ಎದ್ದು ಕಾಣಿಸುತಿತ್ತು. ಎಂದಿನಂತೆ ಸುಯೋಧನನೇ ಮಾತನಾಡುತ್ತಿದ್ದ, "ಆಚಾರ್ಯ ದ್ರೋಣರನ್ನು ಮಹಾಸೇನಾನಿಯನ್ನಾಗಿ ಮಾಡುತ್ತಿದ್ದೇನೆ". ಎಲ್ಲರಿಗೂ ಒಪ್ಪಿಗೆ, ಆದರೂ ಎಲ್ಲರು ಕರ್ಣನತ್ತ ತಿರುಗಿ ನೋಡಿದರು, ಅವನ ಪ್ರತಿಕ್ರಿಯೆ ಹೇಗಿರಬಹುದೆಂಬ ನಿರೀಕ್ಷೆಯಲ್ಲಿ. ಕರ್ಣನೂ ಒಪ್ಪಿಗೆಯ ತಲೆಯಾಡಿಸಿದ್ದ!

ಭೀಷ್ಮರ ಸೇನಾಧಿಪತ್ಯದಲ್ಲಿ ಹೋರಾಡೆನು ಎಂದು ಶಪತ ಮಾಡಿ ಹೊರನಡೆದ ನಾನು ದ್ರೋಣರು ಮಹಾಸೇನಾನಿಯಾದಾಗ ಯಾಕೆ ಸುಮ್ಮನಿದ್ದೆ? ಭೀಷ್ಮರಿಗೆ ಕೊಡುತ್ತಿದ್ದ ಗೌರವಕ್ಕಿಂತ ಜಾಸ್ತಿ ಗೌರವ ದ್ರೋಣರಿಗೆ ದಕ್ಕುತ್ತಿರಲಿಲ್ಲ ನನ್ನಿಂದ. ಭೀಷ್ಮರ ಅನುಪಸ್ಥಿತಿಯಲ್ಲಿ ನಾನು ಹೋರಾಡಲೇ ಬೇಕಾಗಿತ್ತು, ಇಲ್ಲವಾಗಿದ್ದರೆ ಸುಯೋಧನನಿಗೆ ಸಂಶಯ ಬರುತ್ತಿರಲಿಲ್ಲವೆ? ಎಲ್ಲವನ್ನೂ ದ್ರೋಣರ ಜವಾಬ್ದಾರಿಕೆಯಲ್ಲಿ ಮಾಡಿದರಾಯ್ತು ಎಂಬ ಸಮಾಧಾನದಲ್ಲಿ ಬಿಲ್ಲನ್ನು ಹೆಗಲಿಗೇರಿಸಿದ ಕರ್ಣ. ಚಕ್ರವ್ಯೂಹ ರಚಿಸಿ ಧರ್ಮಜನನ್ನು ಹಿಡಿಯಬೇಕೆಂದಿದ್ದ ದ್ರೋಣ ಮತ್ತು ಕೌರವನ ಲೆಕ್ಕಾಚಾರ ಹಿಂದು ಮುಂದಾಯ್ತು. ಮರಿ ಸಿಂಹದಂತೆ ನುಗ್ಗಿ ಬಂದ ಅಭಿಮನ್ಯು ಜಯದ್ರಥ, ದುಶ್ಯಾಸನ, ಲಕ್ಷ್ಮಣರನ್ನು ಸೋಲಿಸಿ ಹಿಮ್ಮೆಟ್ಟಿಸಿದ. ಅರವತ್ತು ದಾಟಿದ ಮುದಿ ಹುಲಿ ಕರ್ಣನಿಗೂ ನೀರು ಕುಡಿಸಿದ. ಪಾರ್ಥಪುತ್ರ ಅಭಿಮನ್ಯುವಿನಲ್ಲಿ ಪಾರ್ಥನನ್ನೆ ಕಂಡವನಂತೆ ಗರಬಡಿದು ನಿಂತ ಕರ್ಣ ಸೋತುಹೋದ. ಕಪಟಿ ಶಕುನಿಯ ಸಲಹೆಯಂತೆ ಕೌರವ ಸೇನೆಯ ಪ್ರಮುಖರೆಲ್ಲ ಸೇರಿ ಬಾಣಗಳಿಲ್ಲದೆ, ಖಡ್ಗದೊಂದಿಗೆ ಸೆಣೆಸುತ್ತಿದ್ದ ಬಾಲಕನನ್ನು ನಿರ್ದಯವಾಗಿ ಸಾಯಿಸಿದರು.

ಅರ್ಜುನನಿಗೆ ಅಭಿಮನ್ಯುವಿನ ಸಾವಿನ ನೋವು, ಅವನ ಸಾವಿಗೂ ಹಾಗೂ ಏಟು ತಿಂದು ಮಲಗಿದ ಧರ್ಮಜನ ನೋವಿಗೂ ಕರ್ಣನೂ ಕಾರಣವೆಂಬ ಸಿಟ್ಟು ಸೇರಿಕೊಂಡು ಕರ್ಣನನ್ನು ಮುಗಿಸಿಯೇ ಸಿದ್ಧವೆಂದು ಅರ್ಜುನ ಶಪತ ಮಾಡಿದನಂತೆ. ಸುದ್ದಿ ಕರ್ಣನ ಕಿವಿಗೂ ಬಿತ್ತು. ದ್ರೋಣರ ಸಾವಿನ ನಂತರ, ಕರ್ಣನಿಗೆ ಮಹಾಸೇನಾನಿಯ ಪಟ್ಟ, ಸಾರಥಿಯಾಗಿ ಶಲ್ಯನನ್ನು ಆಯ್ಕೆ ಮಾಡಿದ್ದ ಕರ್ಣ. ಒಪ್ಪಿಗೆಯಿಲ್ಲದೆ, ಸುಯೋಧನನ ಬಲಾತ್ಕಾರಕ್ಕೆ ಗಂಟು ಬಿದ್ದು ಒಪ್ಪಿದ್ದ ಮುದುಕ ಶಲ್ಯ. ಯುದ್ಧಭೂಮಿಯಲ್ಲಿ ಅವಹೇಳನಕಾರಿ ಮಾತುಗಳನ್ನಾಡಿ ಕರ್ಣನ ಮನಃಶಾಂತಿ, ಏಕಾಗ್ರತೆ ಕೆಡಿಸಿದ್ದ ಶಲ್ಯ. ಮತ್ತೆ ಮತ್ತೆ "ಸೂತಪುತ್ರನಿಗೆ ಆರ್ಯ ಮಹಾರಾಜನೊಬ್ಬ ಸಾರಥಿ, ಎಂಥಾ ದುರಹಾಂಕಾರಿಗಳು" ಎಂದು ಛೇಡಿಸುತ್ತಿದ್ದ ಶಲ್ಯ. ಕೊನೆಗೆ ರಥದಿಂದ ಇಳಿದೇ ಹೋದನವ.

ಎದುರುಗಡೆ ನಿಂತಿರುವುದು ಅರ್ಜುನನ ರಥ. ಅವನ ಸಾರಥಿ ಕೃಷ್ಣ, ರಥದಲ್ಲಿ ಗಾಂಡೀವವನ್ನು ಹಿಡಿದು ನಿಂತ ನನ್ನ ಸಹೋದರ, ನನ್ನ ಪರಮ ಶತ್ರು. ಬಾಣಗಳನ್ನು ಒಬ್ಬರ ಮೇಲೊಬ್ಬರು ಪ್ರಯೋಗಿಸಿ ನಮ್ಮ ನಮ್ಮಲ್ಲೇ ಶಕ್ತಿ ಪ್ರದರ್ಶನ. ಅರವತ್ತಕ್ಕೂ ಮಿಕ್ಕಿದ ನಾನು ಐವತ್ತರ ಅರ್ಜುನನಿಗೆ ಸಾಟಿಯಾಗಬಲ್ಲೆನೆ? ಅದೆಂತಹ ನಿಖರತೆಯ ಬಾಣ ಪ್ರಯೋಗ? ನನ್ನ ಸೈನಿಕರನ್ನೆಲ್ಲಾ ಹಿಮ್ಮೆಟಿಸುತ್ತಿದ್ದಾನಲ್ಲ! ಶಲ್ಯ ಇಳಿದು ಹೋಗಲು, ಅರ್ಜುನನ ಬಾಣದೇಟು ಕೂಡಾ ಒಂದು ಕಾರಣವಲ್ಲವೆ. ಸಾರಥಿಯಲ್ಲದ ಮಹಾರಥಿಯೊಬ್ಬನೇ ರಥವನ್ನು ನಡೆಸಿ ಎಷ್ಟು ಕಾದಾಡಬಹುದು? ಕುದುರೆಗಳ ನಡೆಸುವವರಿಲ್ಲ, ಬಾಣಗಳ ಎತ್ತಿ ಕೊಡುವವರಿಲ್ಲ, ಸುತ್ತ-ಮುತ್ತ, ಅಕ್ಕ-ಪಕ್ಕದ ಸನ್ನಿವೇಶವ ತಿಳಿಸುವವರಿಲ್ಲ. ಕರ್ಣನಿಗೆ ಕೈಕಟ್ಟಿದಂತಾಯಿತು. ಅಲ್ಲಿಗೆ ನಿಲ್ಲಲಿಲ್ಲ ಅವನ ಹಣೆಬರಹದ ಬವಣೆ, ರಥದ ಚಕ್ರವೊಂದು ಮಣ್ಣಿನಲ್ಲಿ ಹುಗಿದು ಹೋಗಿ ರಥ ಮುಂದೆ ಚಲಿಸದಂತಾಯಿತು. ಕುದುರೆಗಳು ಎಷ್ಟು ಎಳೆಯಲು ಯತ್ನಿಸಿದರೂ ರಥ ಮುಂದೆ ಹೋಗುತ್ತಿರಲಿಲ್ಲ. ಕರ್ಣ ರಥದಿಂದಿಳಿದು ಚಕ್ರ ಎತ್ತುವ ಕಾರ್ಯಕ್ಕಿಳಿಯಲೇಬೇಕಿತ್ತು!

ರಥದಿಂದ ಕೆಳಗಿಳಿದ ಕರ್ಣ, ರಥದ ಗಾಲಿಯ ಸಂದಿಗಳ ನಡುವೆ ಕೈಯೇರಿಸಿ ಗಾಲಿಯ ಎತ್ತುವ ಪ್ರಯತ್ನ ಮಾಡುತ್ತಿದ್ದ. ಕೃಷ್ಣ ಅರ್ಜುನರಲ್ಲೇನೊ ಗುಸು ಗುಸು. ಕೃಷ್ನ ನನ್ನ ಮೇಲೆ ಬಾಣ ಹೂಡಲು ಅರ್ಜುನನಿಗೆ ಆದೇಶಿಸುತ್ತಿದ್ದಾನಲ್ಲ. ಇಲ್ಲ, ಅಸಾಧ್ಯವೆನ್ನುತ್ತಿರುವ ಅರ್ಜುನ! "ರಣರಂಗದಲ್ಲಿ ಆಯುಧವಿಲ್ಲದೆ, ಅಸಹಾಯಕ ಪರಿಸ್ಥಿತಿಯಲ್ಲಿರುವ ಯೋಧನೊಬ್ಬನ ಮೇಲೆ ಬಾಣ ಪ್ರಯೋಗಿಸಲಾರೆ" ಎನ್ನುತ್ತಿದ್ದಾನಲ್ಲ ಅರ್ಜುನ! ಅವನ ಮಗ ಅಭಿಮನ್ಯುವನ್ನು ಹೀಗೆ ಸಾಯಿಸಿರಲಿಲ್ಲವೆ ನಾವೆಲ್ಲಾ ಸೇರಿ. ಜ್ಞಾಪಿಸಿರಬೇಕು ಕೃಷ್ಣ. ಅರ್ಜುನನ ಕೈ ಬಾಣಗಳತ್ತ, ಇಲ್ಲ, ಆ ಕೃಷ್ಣನೇ ಬಾಣಗಳನ್ನು ಎತ್ತಿ ಕೊಡುತ್ತಿದ್ದಾನೆ. ನನ್ನ ಮೇಲೆ ಗುರಿಯಿಡುತ್ತಿದ್ದಾನೆ ಅರ್ಜುನ. ಅವನ ಕೈ ಯಾಕೆ ಅದುರುತ್ತಿದೆ? ಅವನಿಗಾದರೂ ಅರಿವಿದೆಯೇ, ನಾನು ಅವನ ಹಿರಿಯಣ್ಣನೆಂದು? ಇಲ್ಲ ಅಸಾಧ್ಯ, ತಿಳಿದಿದ್ದರೆ ನನ್ನ ಮೇಲೆ ಬಾಣ ಹೂಡುವುದಿರಲಿ, ಯುದ್ಧವನ್ನೇ ಕೈ ಬಿಡುತ್ತಿದ್ದರೇನೋ ಈ ಪಾಂಡವರು. ಅದುರುತ್ತಿರುವ ಕೈಗಳನ್ನು ನಿಯಂತ್ರಿಸಿಕೊಳ್ಳುತ್ತಾ ಅರ್ಜುನ ಬಾಣ ಪ್ರಯೋಗಿಸಿಯೇ ಬಿಟ್ಟ. ನಾನ್ಯಾಕೆ ತಪ್ಪಿಸಿಕೊಳ್ಳಲು ಯತ್ನಿಸುತ್ತಿಲ್ಲ, ಹೇಗೆ ತಪ್ಪಿಸಿಕೊಳ್ಳಲಿ? ಇದಲ್ಲವಾದರೆ ಇನ್ನೊಂದು ಬಾಣ, ನನ್ನ ಸಾವು ನಿಶ್ಚಿತ, ಅದು ಅರ್ಜುನನ ಕೈಯಲ್ಲಿ. ಸಾವನ್ನು ನಿರೀಕ್ಷಿಸುವುದೊಂದೇ ನನಗುಳಿದದ್ದು. "ಅಮ್ಮಾ ಕುಂತಿ, ನಿನ್ನ ಮಕ್ಕಳಾರನ್ನೂ ನಾನು ಕೊಂದಿಲ್ಲ, ನೋಡಿಲ್ಲಿ, ನಿನ್ನ ಒಬ್ಬ ಮಗನಿಂದಲೇ, ನಿನ್ನ ಇನ್ನೊಬ್ಬ ಮಗನ ಸಾವು. ಸಾಯುವ ಈ ಗಳಿಗೆಯಲ್ಲಿ ನನ್ನಲ್ಲಿರುವ ಈ ಎಲ್ಲಾ ಮಾತುಗಳನ್ನು ಯಾರಲ್ಲಿ ಹೇಳಿಕೊಳ್ಳಲಿ? ಇಲ್ಲ, ಕರ್ಣನ ನೋವು ಯಾರಿಗೂ ತಿಳಿಯುವುದು ಬೇಕಾಗಿಲ್ಲ, ಕರ್ಣನ ಕರ್ಣಗಳಿಗೆ ಕೇಳಿಸಿದರೆ ಸಾಕು". ಅಲ್ಲಿಗೆ ವಿಧಿ ಅವನಿಗೆ ಮತ್ತೆ ಯೋಚಿಸುವ ಅವಕಾಶವೀಯಲಿಲ್ಲ. ಅರ್ಜುನ ಹೂಡಿದ ಬಾಣ ಕರ್ಣನ ಎದೆಯಲ್ಲಿ ತೂರಿಕೊಂಡು ಮನೆ ಮಾಡಿ ನಿಂತಿತು. ಕೃಷ್ಣಾರ್ಜುನರನ್ನೊಮ್ಮೆ ನೋಡಿದ ಕರ್ಣ, ಕೊನೆಯ ಬಾರಿಯೆಂಬಂತೆ. ತುಟಿಯಂಚಿನಲ್ಲಿ ಸಂತೃಪ್ತಿಯ ನಗು, ಕಣ್ಣಂಚಿನಲ್ಲಿ ವೇದನೆಯ ನೋವು. ನೋಡು ನೋಡುತ್ತಿದ್ದಂತೆ ಕರ್ಣನ ಆತ್ಮದಿಂದ ಬೇರ್ಪಟ್ಟ ಶರೀರ ಶವವಾಗಿ ಧರೆಗುರುಳಿತು. ದೇಹದಿಂದ ಬೇರ್ಪಟ್ಟ ಆತ್ಮ ಪ್ರಾಣಪಕ್ಷಿಯಂತೆ ಮೇಲೆ ಹಾರಿ ಹೋಯಿತು.