Wednesday, January 14, 2009

ನಿವೇದನೆ

ನಿವೇದನೆ

ಮೊದಲೆಲ್ಲ ಈ ಥರ ಆಗಬಹುದೆಂಬ ಅರಿವಿರಲಿಲ್ಲ. ಧಾರಾಕಾರವಾಗಿ ಸುರಿವ ಮಳೆಯಲ್ಲಿಯೂ ಎನೋ ಕಳೆದುಕೊಂಡ ಅನುಭವ. ಬೆಂಗಳೂರಿನಿಂದ ಜೋಗದತ್ತ ಬಸ್ಸಿನಲ್ಲಿ ಪಯಣಿಸುತ್ತಿದ್ದ ದಿನವಾಗಿತ್ತದು. ಹೊರಗಡೆ ಮಳೆರಾಯನ ಆರ್ಭಟದ ನಡುವೆಯಲ್ಲೂ ಬಸ್ಸಿನೊಳಗೆ ಹಣೆ ಬೆವರುವಷ್ಟು ಸೆಕೆ! ಸರಿ, ಪಕ್ಕದ ಸೀಟಿನಲ್ಲಿ ಯಾರೂ ಇಲ್ಲದಿರುವುದನ್ನು ನನ್ನ ಪ್ರಯೋಜನಕ್ಕೆ ಪಡೆದುಕೊಂಡು ಗಾಜಿನ ಕಿಡಕಿಯನ್ನ ಕೊಂಚ ಸರಿಸಿದ್ದೆ, ನನ್ನ ಈ ಕ್ರೀಯೆ ಯಾರಿಗೂ ಅಡ್ಡಿಪಡಿಸುವುದಿಲ್ಲವೆಂದು ಖಾತ್ರಿ ಪಡಿಸಿಕೊಂಡ ನಂತರ. ಕಣ್ಣುಗಳು ಅಂಕುಡೊಂಕಾಗಿ ಸಾಗುತಿದ್ದ ರಸ್ತೆಯ ಇಕ್ಕೆಲಗಳ ಪ್ರಕೃತಿಯ ಸೊಬಗ ಸವಿಯುತಿದ್ದರೆ, ಮನಸ್ಸಿನ ಯೋಚನೆಯ ಭರ ಮಳೆಯ ತೀವೃತೆಗೆ ಹೊಂದಿಕೊಂಡಂತಿತ್ತು. ಅವ್ಯಕ್ತವಾದ ಭಾವನೆಗಳು ಮನದ ಮೂಲೆಯಿಂದ ಹುಟ್ಟಿ ಕಾಣದ ದಾರಿಯನ್ನು ಅರಸಿ ಹೊರಟಿದ್ದವು. ಭಾವನೆಗಳ ಉಗಮ, ಸಂಗಮ, ಆಳ ಮತ್ತು ಪರಿದಿಯ ಬಗ್ಗೆ ತಲೆ ಕೆಡಿಸಿಕೊಳ್ಳುವ ಗೋಡವೆಗೆ ಹೋಗದೆ, ಕಣ್ಣು ನೆಟ್ಟ ಪಥದತ್ತ ನಾನು ಹೊರಟಿದ್ದೆ.

ಜೋಗದ ಅಗಾಧ ಜಲಧಾರೆಯನ್ನು ಕೆಳಗಿಳಿದು ನೋಡುವ ಹಂಬಲ. ಸ್ನೇಹಿತರ ಜೊತೆಗೂಡಿ ಕೆಳಗಿಳಿಯುವಾಗ ಹನಿ ಹನಿಯೋಪಾದಿ ಬೀಳುತ್ತಿದ್ದ ಮಳೆ, ಕೆಳಗಿಳಿಯುತ್ತಿದಂತೆ ಮೇಲಿಂದ ಘನೀಕರಿಸಿ ಮಳೆಯಾಗಿ ಧರೆಗಿಳಿಯುತ್ತಿದ್ದ ನೀರಿನ ಜೊತೆ ಕೈಜೋಡಿಸಿ ಸವಾಲೆಸೆಯುವಂತೆ ಸುರಿಯುತಿತ್ತು. ಒಂದೆಡೆ ಗಾಳಿ ತುಂಬಿದ ಮಳೆ, ಇನ್ನೊಂದೆಡೆ ಈ ಹೊಸ ಅನುಭವ ಕೊಡುತ್ತಿರುವ ಮುದ, ನಡುವೆ ನಿನ್ನ ನೆನಪು! ಏಲ್ಲ ರಸ-ತಾಳ-ಭಾವಗಳ ಸಮ್ಮೇಳನ ಎಂಬಂತಿತ್ತು ನನ್ನ ಪರಿಸ್ಥಿತಿ. ನೀನಿರಬೇಕಿತ್ತು ಜೊತೆಗೆ ಅನ್ನುವುದು ಹಿಡಿತಕ್ಕೆ ಸಿಗದ ಮನದಾಸೆಯಾಗಿತ್ತು. ಟೈಟಾನಿಕ್ ಸಿನೇಮಾದಲ್ಲಿ ನಾಯಕ ಮತ್ತು ನಾಯಕಿ ಹಡಗಿನ ಮುಂಚೂಣಿಯಲ್ಲಿ ಬೀಸುತ್ತಿರುವ ಗಾಳಿಗೆ ಎದೆಯೊಡ್ಡಿ ನಿಂತಂತೆ, ಕೈಗಳನ್ನು ಎತ್ತಿ ಬೀಸುತ್ತಿರುವ ಮಳೆ ಗಾಳಿಯನ್ನು ಅಪ್ಪಲು ನಿಂತ ನನ್ನನ್ನು ಹಿಂದಿಂದ ನೀನು ಬಾಚಿ ತಬ್ಬಿಕೊಂಡಂತೆ ಅನುಭವ. ತಿರುಗಿ ನೋಡಿದರೆ ನೀನೆಲ್ಲಿ? ಅದೆಷ್ಟೊ ದೂರದಲ್ಲಿ ನನ್ನ ನೋಡಿ ಕಿಸಕ್ಕನೆ ನಕ್ಕಂತೆ. ಅಷ್ಟೊಂದು ಕಾಡಬೇಡ ಕಣೆ ನನ್ನ!

ಮತ್ತೆ ಸಂಜೆ ಗೋಕರ್ಣದತ್ತ ಪ್ರಯಾಣ. ಕಾದು ಕಾದು ಸಿಕ್ಕ ಕೊನೆಯ ಬಸ್ಸಿನೊಳಗೆ ನುಗ್ಗಿ ಕಿಡಕಿ ಪಕ್ಕದ ಸೀಟನ್ನು ಹಿಡಿದುಕೊಂಡೆ. ಕಿಡಕಿಯ ತೂರಿ ಒಳ ನುಗ್ಗಿದ ತುಂತುರು ಮಳೆ ಮುಖದ ಮೇಲೆ ಬಿದ್ದಾಗ ಅದೇನೊ ಹಿತವಾದ ಅನುಭವ. ಹಾಗೆ ಕಣ್ಣು ಮುಚ್ಚಿ ಸೀಟಿಗೊರಗಿದರೆ, ಮನಸ್ಸಿನಲ್ಲಿ ಪುಟಿದೇಳುತ್ತಿದ್ದ ಭಾವನೆಗಳ ಅಸ್ತಿತ್ವದ ಪೂರ್ಣ ಅರಿವಾಯ್ತು. ಹೌದು, ನನ್ನ ಮನಸ್ಸು ನಿನ್ನ ನೆನಪಿನ ಸುಳಿಯ ಸೃಷ್ಟಿಸಿ, ಒಂದೊಂದೆ ಎಳೆಯನ್ನು ಬಿಚ್ಚುತಿತ್ತು. ನಿನ್ನ ನಾನು ಮಿಸ್ ಮಾಡ್ಕೊತಿದ್ದಿನಿ ಅನ್ನುವುದಷ್ಟೆ ಮೊದಲಿಗೆ ಅರಿವಾದ ವಿಷಯ. ಗಕ್ಕೆಂದು ಬಸ್ಸು ನಿಂತಾಗ ಭಾವನೆಗಳ ಕೊಂಡಿ ಒಂದೊಂದಾಗಿ ಹೊರಬಿದ್ದು, ಅರಿವಿನ ಪರಿಧಿಯೊಳಗಡೆ ನುಗ್ಗಿತು. ಅಲ್ಲಿಗೆ ಮನಸ್ಸಿನಲ್ಲಿ ನಡೆಯುತಿದ್ದ ಭಾವನೆಗಳ ತಿಕ್ಕಾಟಗಳಿಗೊಂದು ಆಕಾರ ಬಂತು! ಅಲ್ಲಿ ಸುತ್ತಿಕೊಂಡಿರೊ ಎಲ್ಲಾ ಭಾವನೆಗಳ ಎಳೆಯಲ್ಲೂ ನಿನ್ನದೇ ಇರುವಿಕೆ! ಒಂದೆಡೆ ನನಗೆ ಪ್ರೀಯವಾದ ನಿನ್ನ ವ್ಯಾವಹಾರಿಕ ವ್ಯಕ್ತಿತ್ವ - ನಿನ್ನ ಆ ಚುರುಕು ಮಾತುಗಳು, ಎಲ್ಲವನ್ನೂ ವಿಷ್ಲೇಶಿಸಿಯೇ ಒಪ್ಪಿಕೊಳ್ಳುವ ಬಗ್ಗೆ ನಿರ್ಧರಿಸುವ ಪರಿಕ್ರಮ, ಅನಾವಶ್ಯಕ ವಿಷಯಗಳಲ್ಲಿ ನಿನಗಿರುವ ತಟಸ್ತ ಭಾವನೆ, ಅರಿವಿಗೆ ಬಾರದ ವಿಷಯಗಳನ್ನು ಪರಿಧಿಯೊಳಗೆಳೆದೊಯ್ಯಲು ನಿನಗಿರೊ ಕುತೂಹಲ. ಅಷ್ಟಕ್ಕೆ ನಿಲ್ಲಲಿಲ್ಲ. ಇನ್ನೊಂದೆಡೆ, ನಿನ್ನ ಆತ್ಮೀಯರ ಮೇಲೆ ನಿನಗಿರುವ ಪ್ರೀತಿ, ಕಾತರ, ಒಲವು, ಮಮತೆ. ಹಿಂದೊಮ್ಮೆ ಎಲ್ಲೋ ಒದಿದ್ದ ನೆನಪು, "ಒಬ್ಬ ಹುಡುಗನಿಗೆ ಹುಡುಗಿಯೊಂದು ಇಷ್ಟವಾದಳು ಅಂಥಾದರೆ, ಆ ಹುಡುಗಿಯ ಗುಣ ನಡತೆಗಳು ಅವನ ತಾಯಿಯನ್ನು ಹೋಲುತ್ತಿರುವುದು". ಒಪ್ಪಲೇ ಬೇಕಾದಂತ ಸತ್ಯ ನನ್ನ ವಿಷಯದಲ್ಲಿ.

ನೀನು ನನಗಿಷ್ಟವಾಗಲು ಇವಿಷ್ಟೆ ಸಾಕಾಗಿದ್ದರೂ, ನಿನ್ನನ್ನು ನನ್ನ ಪ್ರೀತಿಯ ಬಂದನದಲ್ಲಿ ಸಿಲುಕಿಸಬೇಕೆಂಬ ಅವಶ್ಯಕತೆ ನನಗಿರಲಿಲ್ಲ. ಯಾವುದೇ ವಿಷಯದಲ್ಲಿ ನನಗೇನೋ ಕೊರತೆ ಇದೆ ಅಂದೆನಿಸಿಲ್ಲ ನನಗೆ. ಇದ್ದುದರಲ್ಲೆ ಸುಖ ಸಂತೋಷ ಹುಡುಕುವ ಜಾಯಾಮಾನ ನನ್ನದು. ಪ್ರೀತಿಸಲು, ನನ್ನ ಕಷ್ಟಗಳಿಗೆ, ಬೇಕು ಬೇಡಗಳಿಗೆ ಹೆಗಲಾಗಲು ಯಾವ ಹುಡುಗಿಯ ಅವಶ್ಯಕತೆ ಇಲ್ಲದಿರುವಾಗ ನಿನ್ನನ್ನು ಪ್ರೀತಿಸುತಿದ್ದೇನೆ ಎಂಬ ಭಾವನೆ ಹೇಗೆ, ಯಾಕೆ ಹುಟ್ಟಿಕೊಂಡಿತು ಎಂದು ನೀನು ಪ್ರಶ್ನಿಸಿದರೆ, ಒಂದು ನಿರ್ಧಿಷ್ಟವಾದ ಉತ್ತರವಿಲ್ಲ ನನ್ನಿಂದ! ಮತ್ತೆ "ಯಾಕೋ ನಾನಿಷ್ಟ ನಿನಗೆ" ಎಂದು ಪ್ರಶ್ನಿಸಬೇಡ ಕಣೆ ನನ್ನ!

ಇವಿಷ್ಟು ಸತ್ಯ!, ನನ್ನ ಮನಸ್ಸಿನಾಳದ ಭಾವನೆಗಳ ಜೊತೆ ನೀನು ಬೇರು ಬಿಟ್ಟಿದ್ದೀಯ. ನಿನ್ನ ಯೋಚನೆ ನನ್ನ ಮನಸ್ಸಿಗೇನೋ ಮುದ ನೀಡುತ್ತಿದೆ. ನಿನ್ನ ಇರುವಿಕೆ ಮತ್ತು ಇಲ್ಲದಿರುವಿಕೆ ನನ್ನ ಕ್ರೀಯೆಗಳ ಮೇಲೆ ಪರಿಣಾಮ ಬೀರುತ್ತಿವೆ. ಮೊಬೈಲ್ ಗುಣುಗಿಕೊಂಡರೆ, ಅದು ನಿನ್ನಿಂದ ಅಲ್ಲವೆಂದು ತಿಳಿದರೆ ಮನಸ್ಸು ಮುದುಡುತ್ತದೆ. ಸೂರ್ಯ ಹುಟ್ಟಿ, ಮುಳುಗುವ ಅವಧಿಯಲ್ಲಿ ನಿನ್ನೊಮ್ಮೆಯೂ ಸಿಗದಿದ್ದರೆ ಅದೇನೊ ಕಳೆದುಕೊಂಡ ಅನುಭವ. ನಾನು ಕಳೆದುಕೊಂಡಿದ್ದೇನು? ಈ ಪ್ರಶ್ನೆಗೆ ನನ್ನಲ್ಲೂ ಉತ್ತರವಿಲ್ಲ! ಇತ್ತೀಚೆಗೆ ಹೊಸ ವರೆತ ಶುರುವಾಗಿದೆ. ನೀನು ನನ್ನ ಮುಂದೆ ಇನ್ನಾವುದೊ ಹುಡುಗನ ಹೆಸೆರು ತೆಗೆದರೆ, ಸೋಲುತ್ತಿರುವ ಭಾವನೆ ನನ್ನಲಿ. ಅದನ್ನು ಅಸೂಯೆ ಎಂದು ಹೇಗೆ ಹೆಸರಿಸಲಿ? ನೀನು ಬೇರೆಯವರ ಸಾಂಗತ್ಯದಲ್ಲಿ ಹಿತ ಕಾಣುವಿಯೆಂದಾದರೆ ನಾನು ಸಂತೋಷ ಪಡುವುದೆ ಶ್ರೇಷ್ಟತೆ ತಾನೆ? ಆದರೆ ಹಾಗಾಗುತ್ತಿಲ್ಲ, ನೀನು ನನ್ನ ಸಾಮಿಪ್ಯ, ಗೆಳೆತನದಲ್ಲಿ ಇನ್ನೂ ಹಿತ ಕಾಣಬೇಕೆಂಬ ಆಸೆ. ಸ್ವಾರ್ಥಿ ಪ್ರಪಂಚದಲಲ್ಲವೆ ನಾನು ಬದುಕುತ್ತಿರುವುದು?

ಮಸಣದ ಹೂವು ಸಿನೇಮಾ ನೋಡಿದಿಯೇನೆ ನೀನು? ಅದರಲ್ಲೊಂದು ಹಾಡು ಬರುತ್ತೆ:
ಯಾವ ಕಾಣಿಕೆ ನೀಡಲಿ ನಿನಗೆ ಓ ಎನ್ನ ಪ್ರೆಯಸೀ?
ಯಾವ ಕಾಣಿಕೆ ನೀಡಲಿ ನಿನಗೆ ಓ ಎನ್ನ ಪ್ರೆಯಸೀ?

ಮಲೆನಾಡ ಕಣಿವೆಗಳ ಹಸಿರು ಬನದಿಂದ
ನಿನಗಾಗಿ ಗಿಳಿಯೊಂದ ನಾ ತರಲಾರೆ
ಸಾಗರದ ಅಲೆಗಳಲಿ ಉಯ್ಯಾಲೆ ಯಾಡುತಿಹ
ಹಂಸ ನಾವೆಯ ನಾ ತರಲಾರೆ

ಮೊದಲಿನಿಂದನೂ ಈ ಹಾಡು ನಂಗೆ ಸಿಕ್ಕಾಪಟ್ಟೆ ಇಷ್ಟ ಕಣೆ. ಯಾಕಂದರೆ, ಎಲ್ಲಾ ಪ್ರೇಮಿಗಳಂತೆ ಮಂದಾರ ಪುಷ್ಪ, ಸೂರ್ಯ-ಚಂದ್ರರನ್ನ ತಂದುಕೊಡ್ತಿನಿ ಅನ್ನೋದಿಲ್ಲ ಈ ಪ್ರೇಮಿ. ತನ್ನ ಹುಡುಗಿಗೆ ಎಲ್ಲಾ ವಾಸ್ತವಿಕತೆಗೆ ಹತ್ತಿರವಿರುವುದನ್ನು, ಸಾದಿಸಬಹುದಾಗಿರುವುದನಷ್ಟೆ ನೀಡುವ ಭರವಸೆ ಮಾಡುತ್ತಾನೆ. ಕಲ್ಪನೆ ಮತ್ತು ಭರವಸೆಗಳನ್ನು ಸಮರ್ಪಕವಾಗಿ ವಿಂಗಡಿಸಿ ನನ್ನಿಂದ ನಿನಗೇನು ಸಿಗುವುದೆಂಬುವುದನ್ನು ವಾಸ್ತವಿಕತೆಗೆ ಹತ್ತಿರ ಇರುವಂತೆ ನಿವೇದಿಸಬೇಕಲ್ಲವೆ? ಅವಕಾಶ ಸಿಕ್ಕಿದರೆ ಈ ಹಾಡು ಕೇಳು. ಇರು, ಈ ಹಾಡನ್ನೇ ನಿನಗೆ ನನ್ನ ಪ್ರೀತಿಯ ಕಾಣಿಕೆಯಾಗಿ ಕೊಡಲೆ? ಇಲ್ಲ, ನೀನೊಪ್ಪುವುದಾದರೆ, ನಿನಗಾಗಿ ನಾನೇ ಈ ಹಾಡು ಹಾಡಲೆ ನಿನ್ನೆದುರು ನಿಂತು?

ಹಾಂ, ಈವಾಗ ನೆನಪಾಯ್ತು ನೋಡು, ಗೋಕರ್ಣಕ್ಕೆ ಹೋಗಿದ್ದಾಗ, ಕಡಲ ಕಿನಾರೆಯಲ್ಲಿ ಕಣ್ಣಿಗೆ ಕಾಣಸಿಕ್ಕ ಕೆಲವೊಂದು (ಸುಂದರವಾಗಿದೆ ಎಂದು ಎತ್ತಿರೋದು) ಕಪ್ಪೆ ಚಿಪ್ಪು, ಮರಿ ಶಂಖದ ಚಿಪ್ಪು ಎಲ್ಲವನ್ನೂ ಎತ್ತಿಟ್ಟುಕೊಂಡೆ. ಅದರಲ್ಲಿ ಒಂದಿಷ್ಟು ನನ್ನ ತಂಗಿಗೆ ಮತ್ತೆ ನಿನಗೆ ಅಂತ ತೆಗೆದಿಟ್ಟಿದೇನೆ. ನಮ್ಮ ಮನಸ್ಸಿಗೆ ಹಿಡಿಸಿದ ವಸ್ತುಗಳನ್ನು ಪ್ರೀತಿಯಿಂದ ನಮಗಿಷ್ಟವಾದವರಿಗೆ ಕೊಡುವುದರಲ್ಲಿ ಅದೇನೋ ಅರಿವಿಗೆ ಬರದ ಸಂತೋಷ. ನಾನವುಗಳನ್ನು ನಿನ್ನ ಕೈ ಮೇಲೆ ಇಟ್ಟರೆ, ಬೇಡವೆನ್ನದೆ ಪ್ರೀತಿಯಿಂದ ತೆಗೆದೆಕೊಳ್ಳುತ್ತೀಯ ಎಂದು ಭರವಸೆ. ಭರವಸೆ, ನಂಬಿಕೆಗಳ ಮೇಲಲ್ಲವೆ ನಮ್ಮ ಜೀವನ ನಡೆಯುವುದು!

ಭಾವನೆಗಳ ಹಂದರಕ್ಕೆ ಬಿದ್ದ ನನಗೆ ಬಿಡುಗಡೆಯ ಸ್ವಾತಂತ್ರ್ಯ ಬೇಕಿನಿಸಿದಾಗ ಸಿಕ್ಕಿದ್ದೇ ಈ ಹಾಳೆ ಮತ್ತೀ ಪೆನ್ನು. ಮನಸಿನ ಹಾಳೆಗಳಲ್ಲಿ ಗೀಚಿರುವುದನ್ನೆಲ್ಲ ಇಲ್ಲಿ ಗೀಚಿದರೆ ಈತ ಹುಚ್ಚನಿರಬಹುದೆಂದು ನೀನು ನಿರ್ಧರಿಸಬಹುದಾದ ಭಯ ಕಣೇ ನನಗೆ! ಪ್ರಾಮಾಣಿಕನಲ್ಲ ನನ್ನ ನಲ್ಲನಾಗ ಬಯಸುವವನು ಎಂದು ತಿರಸ್ಕರಿಸಬೇಡ! ನನ್ನ ಯಾಕೆ, ಹೇಗೆಗಳಿಗೆ ಉತ್ತರವಿಲ್ಲ ನನ್ನಲ್ಲಿ. ನಿನ್ನ ಯಾಕೆ, ಹೇಗೆಗಳಿಗೆ ನಾ ಹೇಗೆ ಉತ್ತರಿಸಲಿ? ಏನು ಅನ್ನುವುದಕಷ್ಟೆ ಉತ್ತರವಿದೆ.
ಹೌದು, ನಾನು ನಿನ್ನನ್ನು ಪ್ರೀತಿಸ್ತಿದ್ದೀನಿ ಕಣೆ, ಒಪ್ಕೊತಿಯೇನೆ ನನ್ನ ನೀನು? ಇಲ್ಲ ಅನ್ನುವಷ್ಟು ಅಧಿಕಾರವಿದೆ ನಿನಗೆ. ಆದರೂ ನೀನು ನನ್ನ ಪ್ರೀತಿಯನ್ನು ಒಪ್ಪಿ, ನನ್ನ ಕೈ ಹಿಡಿಯುವುದನ್ನು ಕಾಯುತ್ತಿದ್ದೇನೆ. ನನ್ನ ಮುಂದಿನ ಕನಸನ್ನು ನನಸಾಗುವ, ಅದಕ್ಕೊಂದು ರೂಪ ಕೊಡುವ ಗೆಳತಿಯಾಗಿ ಬರುವೆಯಾ?

ಕಣ್ಣ ರೆಪ್ಪೆಯಂತೆ ನಿನ್ನ ಕಾಯದಿರಬಹುದು
ಕಂಬನಿ ತುಂಬಿದ ಕಣ್ಣೊರೆಸೊ ಕೈಯಾಗುವೆ

ಮರದಂತೆ ತಂಪು ನೆರಳನೀಯದಿರಬಹುದು
ಉರಿಬಿಸಿಲಿಗೆ ನಿನ್ನ ಹಿಂಬಾಲಿಸುವ ನೆರಳಾಗುವೆ

ಚಂದಿರನಂತೆ ಹೊಂಬೆಳಕನೆರೆಯದಿರಬಹುದು
ದೀಪದಂತೆ ನಿನ್ನ ಬಾಳ ಅನುದಿನ ಬೆಳಗುವೆ

ನಿನ್ನ ಹೇಗೆ, ಯಾಕೆಗಳಿಗೆ ಉತ್ತರವಿಲ್ಲದಿರಬಹುದು
ಅರಿವಿಗೆ ಸಿಗುತ್ತಿರುವುದೊಂದೆ, ನಾನಿನ್ನ ಪ್ರೀತಿಸುತ್ತಿರುವೆ


ತುಂಬು ಪ್ರೀತಿಯಿಂದ,
ನಿನ್ನ ನಲ್ಲನಾಗ ಬಯಸುವ
ನಿನ್ನಿನಿಯ


ದಿನಾಂಕ: ಸೆಪ್ಟಂಬರ್ ೨೩, ೨೦೦೭

No comments: