Monday, August 17, 2015

ರಂಗಿತರಂಗ

ರಂಗಿತರಂಗ



ಆಕಸ್ಮಿಕವಾಗಿ ಯೂ-ಟ್ಯೂಬ್ ನಲ್ಲಿ "ವರ್ಡ್ಸ್" (WORDS) ಎನ್ನೊ ಶಾರ್ಟ್-ಫಿಲ್ಮ್ ನೋಡಿದ್ದೆ, ಎರಡು-ಮೂರು ತಿಂಗಳ ಹಿಂದೆ. ಸ್ನೇಹಿತರೊಬ್ಬರು ಫೇಸ್‍ಬುಕ್ಕಿನಲ್ಲಿ "ರಂಗಿತರಂಗ" ಸಿನೇಮಾದ ಬಗ್ಗೆ ಪೋಸ್ಟ್ ಮಾಡಿ, ನನ್ನನ್ನು ಟ್ಯಾಗ್ ಮಾಡಿದ್ದಾಗಲೆ ಗೊತ್ತಾಗಿದ್ದು - ವರ್ಡ್ಸ್ ಶಾರ್ಟ್-ಫಿಲ್ಮ್ ನಿರ್ದೇಶಿಸಿದ್ದ ವ್ಯಕ್ತಿ ಇದೆ ಅನೂಪ್ ಭಂಡಾರಿ ಎಂದು!
ರಂಗಿತರಂಗದ ಟ್ರೈಲರ್ ನೋಡಿದೆ, ಇಂಟೆನ್ಸ್ ಹಾಗೂ ಗಮನ ಸೆಳೆಯುವಂತ್ತದ್ದು ಅನ್ನಿಸಿತ್ತು, ಏನೋ ಹೊಸತನದ ಜೊತೆಗೆ.
ಸೋ, "ಉಳಿದವರು ಕಂಡಂತೆ" ಸಿನೇಮಾದ ನಂತರ, ಬಹಳಷ್ಟು ಆಸಕ್ತಿಯಿಂದ ನಿರೀಕ್ಷಿಸಿರುವ ಸಿನೇಮಾ "ರಂಗಿತರಂಗ" ಎನ್ನಲಡ್ಡಿಯಿಲ್ಲ.

ನಿರೀಕ್ಷೆಯಂತೆ ಸೋಶಿಯಲ್ ಮೀಡಿಯಾದಲ್ಲಿ ಬಹಳ ಜನರನ್ನು ರೀಚ್ ಆಗಿ, ಬಹಳಷ್ಟು ಕುತೂಹಲವನ್ನು ಸೃಷ್ಟಿಸಿ, ಒಂದು ಉತ್ತಮವಾದ ಕನ್ನಡ ಸಿನೇಮಾಗೆ ಬೇಕಾಗಿರುವ ಎಲ್ಲಾ ಮಾರ್ಕೇಟಿಂಗ್ ನಡೆದಿತ್ತು.
ಇದೇ ಕಾರಣಕ್ಕೆ ಯು.ಎಸ್.ಏ ನಲ್ಲಿ ಮೂವಿ ಸ್ವಲ್ಪ ತಡವಾಗಿಯೆ ಬಿಡುಗಡೆಯಾದರೂ, ನಿರೀಕ್ಷೆಗಿಂತ ಅಧಿಕ ಪ್ರಮಾಣದಲ್ಲೆ ಜನ ಮೆಚ್ಚುಗೆ ಪಡೆದಿದೆ.

ಇದೊಂದು ಸಸ್ಪೆನ್ಸ್ ಸಿನೇಮಾವಾಗಿರುವುದರಿಂದ, ಆದಷ್ಟು ಸೂಚ್ಯವಾಗಿ ವಿಮರ್ಶೆ ಮಾಡಲು ಪ್ರಯತ್ನಿಸುತ್ತೇನೆ.
ಸಿನೇಮಾ ಬಗ್ಗೆ ಹೇಳಬೇಕೆಂದರೆ - ಅದ್ಭುತವಾದ ನಿರ್ದೇಶನ, ಸಸ್ಪೆನ್ಸ್, ಥ್ರಿಲ್ಲಿಂಗ್ ಎಲಿಮೆಂಟ್‍ನೊಂದಿಗೆ ಪ್ರೇಕ್ಷಕನನ್ನು ಸಂಪೂರ್ಣವಾಗಿ ಹಿಡಿದಿಟ್ಟುಕೊಳ್ಳುವಂತ ಕಥೆ-ಚಿತ್ರಕಥೆ,
ಸಾಯಿಕುಮಾರ್ ಒಬ್ಬರನ್ನು ಹೊರತುಪಡಿಸಿ ಹೆಚ್ಚು-ಕಡಿಮೆ ಹೊಸಬರನ್ನೆ ಬಳಸಿಕೊಂಡರೂ, ಉತ್ತಮವಾದ ಅಭಿನಯ, ಕಿವಿಗೆ ಹಿತವಾಗೆನಿಸುವ ಅನೂಪ್ ಭಂಡಾರಿಯವರ ಸಂಗೀತ, ಕಥೆಗೆ ಪೂರಕವಾಗಿ,
ಅಷ್ಟೆ ಬಿಗಿಯಾಗಿರುವ ಅಜನೀಶ್ ಅವರ ಹಿನ್ನಲೆ ಸಂಗೀತ, ಸುಂದರ ಕನ್ನಡ ಕರಾವಳಿಯನ್ನು ಮತ್ತೊಮ್ಮೆ ಅದ್ಭುತವಾಗಿ ಸೆರೆಹಿಡಿದ ಸಿನೇಮಾಟೊಗ್ರಾಫರ್ ಲಾನ್ಸ್ ಕಪ್ಲನ್ ಮತ್ತು ವಿಲ್ಲಿಯಮ್ ಡೆವಿಡ್ - ಒಂದು ಸಂಪೂರ್ಣ ಪ್ಯಾಕೇಜ್ ಡೀಲ್ ಅನ್ನಲು ಏನು ಅಡ್ಡಿಯಿಲ್ಲ!

ಸಿನೇಮಾದ ಆರಂಭದಿಂದಲೆ ಪ್ರೇಕ್ಷಕನ ಸಂಪೂರ್ಣ ಗಮನವನ್ನು ಸೆರೆಹಿಡಿದು, ಸೀಟಿಗೆ ಅಂಟಿಕೊಳ್ಳುವಂತೆ ಮಾಡುವುದೆ ಸಸ್ಪೆನ್ಸ್ ಚಿತ್ರಗಳ ಮೂಲ ಭಂಡಾರ.
ಅದರ ಜೊತೆಗೆ, ಮುಂದೆ ಏನು ಬರಬಹುದು ಎಂಬುವುದನ್ನು ಮೊದಲ ದೃಶ್ಯದಲ್ಲೆ ತೋರಿಸಿ ಪ್ರೇಕ್ಷಕನನ್ನು ಜಾಗ್ರತಗೊಳಿಸುವಂತೆ ಮಾಡಿ, ಆರಂಭದಲ್ಲೆ ನಿರ್ದೇಶಕನಿಗೆ ಗೆಲುವಿನ ಪ್ರಥಮ ರುಚಿ ದೊರಕಿದೆ.

ಯಾವುದೇ ಹಾಸ್ಯ ಕಲಾವಿದರಿಲ್ಲದಿದ್ದರೂ, ಪಾಂಡು-ಸಂಧ್ಯಾರ ಸಂವಾದ, ರಫೀಕ್‍ನ ಮುಗ್ಧ ಮಾತುಗಳಲ್ಲಿ ಕಿರುನಗೆ ತರಿಸುವ ನವಿರಾದ ಸಂಭಾಷಣೆಗಳಿವೆ.
ಸಂದರ್ಭಕ್ಕೆ ಸೂಕ್ತವಾಗಿ, ಚಿಕ್ಕದಾಗಿಯೂ ಬೇಕಾಗಿರುವ ವಿವರಣೆ ನೀಡುವ ಡೈಲಾಗ್ಸ್‍ನ ಜೊತೆಗೆ ಸಿನೇಮಾಟೊಗ್ರಾಫಿಯಲ್ಲೆ ವಿವರಣೆಯ ದೃಶ್ಯಕಾವ್ಯವನ್ನು ಮಾಡಿಸುವುದರಲ್ಲಿ ಸಫಲತೆ ಎದ್ದು ಕಾಣಿಸುತ್ತದೆ.
ನಾಯಕ ಹಾಗು ನಾಯಕಿ (ಗೌತಮ್-ಇಂದು) ದೋಣಿಯಲ್ಲಿ ಹೋಗುತ್ತಿರುವಾಗ ದೂರದಿಂದ ತೋರಿಸುವ ಮೊದಲ ದೃಶ್ಯದಲ್ಲಿ ನಾಯಕ ಮತ್ತು ಅಂಬಿಗ ಇಬ್ಬರೇ ಕಾಣಿಸುತ್ತಾರೆ.
ಕ್ಯಾಮೆರ ದೋಣಿಯನ್ನು ಸಮೀಪಿಸಿದಂತೆ ನಾಯಕನ ಮೈಗಂಟಿ ಕುಳಿತಿರುವ ನಾಯಕಿ ಕಾಣಿಸುತ್ತಾಳೆ. ಇದೊಂದು ಉದ್ದೇಶಪೂರ್ವಕವಾಗಿ ಮಾಡಿರುವ ದೃಶ್ಯವೆಂದು ಮೂವಿ ಮುಂದುವರಿಯುವಾಗ ಅರಿವಿಗೆ ಬರುತ್ತದೆ.
ನಾಯಕನ ಮನೆಯಿಂದ ಅವನ ವಾಚನ್ನು ಕದ್ದುಕೊಂಡು ಹೋಗುವ ಕೆಲಸದಾಕೆ (ರೇಣುಕ) ಮತ್ತು ನಾಯಕನಿಗೆ ಗುಂಡೇಟಿನಿಂದ ಗಾಯಗೊಳಿಸಿರುವ ಗರ್ನಾಲ್ ಬಾಬುವಿನ ನಡುವಿನ ಅನೈತಿಕ ಸಂಬಂಧವನ್ನು ಎಲ್ಲಿಯೂ ಸ್ಪಷ್ಟವಾಗಿ ಹೇಳದಿದ್ದರೂ, ಸೂಚ್ಯವಾಗಿ ಪ್ರೇಕ್ಷಕನ ಗಮನಕ್ಕೆ ಬರುವಂತೆ ಮಾಡಿದ್ದಾರೆ.
ಹೀಗೆ ಸೂಚ್ಯವಾಗಿ ವಿವರಣೆ ನೀಡುವ ಬಹಳಷ್ಟು ದೃಶ್ಯಗಳಿವೆ ಸಿನೇಮಾದಲ್ಲಿ.

ಈ ಸಿನೇಮಾದಲ್ಲಿ ಬರಿ ಗುಡ್ಡದ ಭೂತವೊಂದೆ ಅಲ್ಲ, ಮಾನಸಿಕ ಅಸ್ವಸ್ಥತೆಯ ಒಂದು ದೃಷ್ಟಿಕೋನ, ಅಕ್ರಮ ಮರಳು ಸಾಗಾಣಿಕೆ, ಪ್ರ್‍ಈತಿ-ಪ್ರಣಯ, ಭಾವನೆ, ಯಕ್ಷಗಾನ, ಮೂಡ-ನಂಬಿಕೆ, ಕರಾವಳಿಯ ಸಂಪ್ರದಾಯ ಎಲ್ಲವೂ ಇದೆ.
ಸಿನೇಮಾ ಉದ್ಯಮಕ್ಕೆ ಹೊಸಬರಾದರೂ, ನಿರೂಪ್ ಭಂಡಾರಿ (ನಾಯಕ), ರಾಧಿಕ ಚೇತನ್ (ನಾಯಕಿ), ಹಾಗೂ ಅವಂತಿಕ ಶೆಟ್ಟಿ (ಸಹ-ನಾಯಕಿ) ಉತ್ತಮವಾದ ನಟನೆಯಿಂದ ಗಮನ ಸೆಳೆಯುತ್ತಾರೆ, ವಿಶೇಷವಾಗಿ ರಾಧಿಕ ಚೇತನ್.
ಸಾಯಿಕುಮಾರ್ ಅವರು ಅವರ ಟಿಪಿಕಲ್ ಪಾತ್ರ ಆಯ್ಕೆಯಿಂದ ಹೊರಬಂದು ಒಂದು ಅದ್ಭುತವಾದ ರೋಲ್ ಮಾಡಿದ್ದಾರೆ.
ಕಿರುತೆರೆಯ ಬಹಳಷ್ಟು ಅನುಭವಿ ಕಲಾವಿದರಿಗೆಲ್ಲ ಅವಕಾಶ ಕೊಡಲಾಗಿದೆ, ವಿಶೇಷವಾಗಿ ಶಂಕರ ಮಾಷ್ಟರಾಗಿ ಅನಂತ ವೇಲು, ಇನ್‍ಸ್ಪೆಕ್ಟರಾಗಿ ಅರವಿಂದ ರಾವ್, ಚಿಕ್ಕ ಪಾತ್ರವಾದರೂ ಮಹಾಬಲ ಹೆಗ್ಡೆಯಾಗಿ ಶಂಕರ್ ಅಶ್ವತ್.

ಹಾಗಂತ ನೂನ್ಯತೆಗಳಿಲ್ಲ ಅಂತಲ್ಲ! ಕೆಲವೊಂದು ಚಿಕ್ಕ-ಪುಟ್ಟ ತಾಂತ್ರಿಕ ಹಾಗೂ ಎಡಿಟಿಂಗ್ ತಪ್ಪುಗಳಿವೆ (ನನ್ನ ಗಮನಕ್ಕೆ ಬಂದಂತವು, ಅಥವಾ ಅನ್ನಿಸಿದ್ದು)
೧. ರಫೀಕ್ ಜೀಪನ್ನು ಗೌತಮ್‍ಗೆ ಕೊಡುವಾಗ ರೋಡ್ ಸರಿ ಇಲ್ಲ, ಅರ್ಧ ಗಂಟೆಯ ದಾರಿ ಎಂದ ನೆನಪು. ಆಗ ಇನ್ನೂ ಸರಿ ಬೆಳಕಿತ್ತು. ಆದರೆ ಗೌತಮ್ ಮತ್ತು ಇಂದು ಕಾರನ್ನು ಬಿಟ್ಟು ಕಮರಟ್ಟು ಮನೆಗೆ ಹೋಗುವಷ್ಟರಲ್ಲಿ ಗಾಡ ಕತ್ತಲಾಗಿತ್ತು!
೨. ಗೌತಮ್‍ನನ್ನು ಇನ್‍ಸ್ಪೆಕ್ಟರ್ ವಿಚಾರಣೆ ಮಾಡುವ ದೃಶ್ಯ ರಾತ್ರಿಯ ಸಮಯ (ಪೊಲೀಸ್ ಸ್ಟೇಶನಿನಲ್ಲಿ ಲೈಟ್ ಉರಿಯುತ್ತಿರುತ್ತದೆ, ಹಾಗೂ ಹೊರಗೆ ಕತ್ತಲಿರುತ್ತದೆ). ಅದೆ ಸಮಯಕ್ಕೆ ನಾವುಡರ ಸನ್ನಿವೇಶವು ಸಮಾನಂತರವಾಗಿ ಬರುತ್ತಿರುತ್ತದೆ. ಆದರೆ, ಆ ಸನ್ನಿವೇಶ ಬೆಳಗಿನ ಸಮಯದಲ್ಲಿ.
೩. ಗೌತಮ್ ಮತ್ತು ಸಂಧ್ಯಾ ಇಬ್ಬರು ಪೋಲೀಸ್ ಸ್ಟೇಶನ್‍ಗೆ ಹೋಗುವಾಗ ಜೋರು ಮಳೆ ಬರುತ್ತಿರುವ ಕಾರಣ, ಸಂಧ್ಯಾ ಕೊಡೆಯನ್ನು ಬಳಸುತ್ತಾಳೆ. ಆದರೆ ಅಲ್ಲಿಂದ ಹಿಂತಿರುಗುವಾಗ ಕೊಡೆ ಸಂಪೂರ್ಣವಾಗಿ ಒಣಗಿರುತ್ತದೆ.
೪. ಹರಿಣಿಯ ಡೈರಿ ಓದುತ್ತಾ, ಇಂದು-ಗೌತಮ್-ಹರಿಣಿ ಇವರ ಫ್ಲಾಶ್-ಬ್ಯಾಕ್ ಮತ್ತು ಸಮಾನಂತರವಾಗಿ ನಡೆವ ಸಂಧ್ಯಾ ಯೋಚಿಸುತ್ತಿರುವ ಸಿದ್ಧಾರ್ಥ್-ಸಂಧ್ಯಾ ಇವರ ಫ್ಲಾಶ್-ಬ್ಯಾಕ್ ಎರಡರಲ್ಲೂ ಸಾಂಗ್ಸ್ ಬಂದು (ಎರಡು ಹಾಡುಗಳು ಚೆನ್ನಾಗಿವೆ) ಅವಸರದಲ್ಲಿ ತುರುಕಿಸಿದಂತೆ ಅನ್ನಿಸಿತು.
೫. ಅನಂತ ವೇಲು ಮತ್ತು ಸಾಯಿ ಕುಮಾರ್ ಇಬ್ಬರು ಉತ್ತಮ ನಟರು, ಆದರೆ ನಾವುಡರು ಮತ್ತು ಶಂಕರ ಮಾಸ್ಟ್ರು - ಇಬ್ಬರ ಮಾತಿನಲ್ಲಿ ಕರಾವಳಿಯ ಗ್ರಾಮ್ಯ ಭಾಷೆ ಇಲ್ಲದಿರುವುದು ಒಂದು ದೊಡ್ಡ ನೂನ್ಯತೆ ಅನ್ನಿಸಿತು ನನಗೆ.

ಇಷ್ಟೆಲ್ಲರ ನಡುವೆ, ಹೊಸಬರ ಹೊಸ ಪ್ರಯೋಗದಲ್ಲಿ ಪರಿಶ್ರಮ ಎದ್ದು ತೋರುತ್ತದೆ, ಬಹಳಷ್ಟು ಹೊಸತನ/ತಾಜಾತನ ಕಾಣಿಸುತ್ತದೆ.
ಸಿನೇಮಾದ ಮೊದಲಾರ್ಧದಲ್ಲಿ ಆಗುವ ಭಯವನ್ನು, ದ್ವಿತಿಯಾರ್ಧದಲ್ಲಿ ಕುತೂಹಲವನ್ನಾಗಿ ಪರಿವರ್ತಿಸಿ, ಅಂತಿಮವಾಗಿ ಅನಿರೀಕ್ಷಿತ ಹಾಗು ನಂಬಲಾರ್ಹವಾದ ಉಪಸಂಹಾರವನ್ನು ಕೊಟ್ಟು ಒಂದು ಅದ್ಭುತವಾದ ಸಿನೇಮಾವನ್ನು ಕನ್ನಡ ಪ್ರೇಕ್ಷಕನ ಮುಂದಿಟ್ಟಿದ್ದಾರೆ.
ನಾನು ನೋಡಿರುವ ಸಿನೇಮಾಗಳಲ್ಲಿ ಇದೊಂದು ಉತ್ತಮವಾದ ಚಿತ್ರ!

- ಗಿರೀಶ್ ಶೆಟ್ಟಿ

1 comment:

Unknown said...

Based on the picturization, it is not believable if Rafique has not seen Indu (or they should have taken it in a better way). Related to evening and darkness scene while Rafique and Gautham are talking is understandable that cinematographer would have rejected that scene. I have seen this being done in several movies and they show that reason in the making DVD's. One of the main reason is external lights being useless (we ourselves have seen this while driving a car during the sunset time and headlights of the car is simply just useless and we just drive based on whatever we see through our plain eyes (dusk and dawn are the most dangerous period to drive)). So based on this judgement, it looks like that scene was shot in that way.
One of the other most stupid thing shown in this movie is the new born child, was it a new born child... it looked like Indu delivered an already 2 months old born child. They should have taken it more realistic. My 2 cents.